ಚಿಕ್ಕಬಳ್ಳಾಪುರ: ವಿದ್ಯಾರ್ಥಿ ಪರಿಷತ್ತು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ, ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸುವ ಚಟುವಟಿಕೆ ಗಳಿಗೆ ಆದ್ಯತೆ ನೀಡಬೇಕು ಎಂದು ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿ ರಂಗಪ್ಪ ಹೇಳಿದರು.
ಶಾಂತ ಆರೋಗ್ಯ ವಿಜ್ಞಾನ ಕಾಲೇಜುಗಳಲ್ಲಿ ಡಿಜಿಟಲ್ ಚುನಾವಣೆ ಮೂಲಕ ವಿದ್ಯಾರ್ಥಿ ಪರಿಷತ್ತಿನ ಪ್ರತಿನಿಧಿಗಳಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ಹಂತದಲ್ಲಿಯೇ ಚುನಾವಣೆ ಹಾಗೂ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಟುಂಬ, ಶಾಲೆ, ತರಗತಿ, ಸಮಾಜ, ಕೈಗಾರಿಕೆ ಹಾಗೂ ಸಂಘ-ಸಂಸ್ಥೆಗಳ ವಿವಿಧ ಹಂತಗಳಲ್ಲಿ ನಾಯಕತ್ವದ ಅಗತ್ಯವಿದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಆತ್ಮವಿಶ್ವಾಸ, ಜವಾಬ್ದಾರಿ, ಸಮಯಪಾಲನೆ, ಸಂಘಟನಾ ಸಾಮರ್ಥ್ಯ, ಉತ್ತರದಾಯಿತ್ವ ಹಾಗೂ ಪರಿಣಾಮಕಾರಿ ಸಂವಹನದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿ ಪರಿಷತ್ತು ಅಕಾಡೆಮಿಕ್ ಹಾಗೂ ಸೇವಾ ಪರಂಪರೆಯನ್ನು ಎತ್ತಿಹಿಡಿಯಲಿ: ಡಾ.ಕೋಡಿ ರಂಗಪ್ಪ
ವೃತ್ತಿಪರ ಕೋರ್ಸ್‌ಗಳಲ್ಲಿಯೂ ನಾಯಕತ್ವ ತರಬೇತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ರೂಪಿಸಬೇಕು. ನಾಳಿನ ನಾಯಕರು ಶಾಲಾ-ಕಾಲೇಜುಗಳಲ್ಲಿಯೇ ರೂಪು ಗೊಳ್ಳುತ್ತಾರೆ. ಆದ್ದರಿಂದ ಅಕಾಡೆಮಿಕ್ ಕಲಿಕೆಗೆ ಉತ್ತೇಜನ ನೀಡುವುದರ ಜತೆಗೆ ನಾಯಕತ್ವದ ಮೌಲ್ಯಗಳು ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಅಗತ್ಯ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಡಿಜಿಟಲ್ ಸ್ವರೂಪದಲ್ಲಿ ಆಯೋಜಿಸಿದ ಸಹಾಯಕ ಪ್ರಾಧ್ಯಾಪಕರಾದ ಅನುಷ್, ವಿನಯ್ ಹಾಗೂ ಪ್ರಾರ್ಥನಾ ಅವರ ತಂಡವನ್ನು ಅಭಿನಂದಿಸಲಾಯಿತು.
ಒಟ್ಟು 1,164 ವಿದ್ಯಾರ್ಥಿಗಳು ಮತ ಚಲಾಯಿಸಿದ್ದು, ಪರಿಷತ್ತಿನ ಅಧ್ಯಕ್ಷರಾಗಿ ಡೆನಿಸ್ ಲಾಲು, ಉಪಾಧ್ಯಕ್ಷರಾಗಿ ಅಲ್ಫಿನ್, ಪ್ರಧಾನ ಕಾರ್ಯದರ್ಶಿಯಾಗಿ ದಿಯಾ ನಸ್ರೀನ್, ಖಜಾಂಚಿಯಾಗಿ ಕೀರ್ತನ ಕಿಶೋರ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕುಶಲ್ ಗೌಡ ಆಯ್ಕೆಯಾಗಿದ್ದಾರೆ. ವಿವಿಧ ವಿಭಾಗಗಳ ಪ್ರತಿನಿಧಿಗಳಾಗಿ ಒಟ್ಟು 19 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶಾಂತ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ಪ್ರಾಧ್ಯಾಪಕ ಡಾ. ನವೀನ್ ಸೈಮನ್ ಮಾತನಾಡಿ, ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಪರಿಷತ್ತು ವಿಶಿಷ್ಟ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಅಭಿನಂದನಾ ಸಮಾರಂಭದಲ್ಲಿ ಶಾಂತ ಆರೋಗ್ಯ ವಿಜ್ಞಾನ ಕಾಲೇಜುಗಳ ಬೋಧಕ ವರ್ಗದ ಶ್ರೀಧರ್, ಓಎಸ್, ಸುರೇಶ್, ಸಂದೇಶ್, ವಿನಯ್, ಮುದಸೀರ್, ಸಚಿನ್, ಅನುಷ್, ಸುಭಾಷಿಣಿ, ಬೃಂದಾ, ಬ್ಯೂಟಿ, ಪ್ರಾರ್ಥನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.