ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಲಿತ ಸಮುದಾಯದ ಪರ ಶಾಸಕ ಪ್ರದೀಪ್ ಈಶ್ವರ್ ಖಡಕ್ ನಿಲುವು; ಜಿಲ್ಲೆಯ ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ತಿರುವು

ಸೆ.29ರಂದು ಬರೆದಿರುವ ಪತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ದಲಿತರ ಮೇಲಿನ ದೌರ್ಜನ್ಯ, ದೇವಾಲಯ ಪ್ರವೇಶ ನಿರಾಕರಣೆ ಹಾಗೂ ಚಿಂತಾಮಣಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿರುವ ಕುರಿತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಊಲವಾಡಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ:
ಚಿಂತಾಮಣಿ ತಾಲೂಕಿನ ಊಲವಾಡಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ ಎಂಬ ಆರೋಪ ಇದೀಗ ಕೇವಲ ಸಾಮಾಜಿಕ ವಿಚಾರವಾಗಿ ಉಳಿಯದೆ, ಕಾಂಗ್ರೆಸ್‌ನ ಆಂತರಿಕ ರಾಜಕೀಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ದಲಿತರ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ವಿಚಾರವನ್ನು ಮುಂದಿಟ್ಟುಕೊಂಡು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar)ಅವರು ತಾಲೂಕು ಆಡಳಿತಕ್ಕೆ ಬರೆದಿರುವ ಪತ್ರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸೆ.29ರಂದು ಬರೆದಿರುವ ಪತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ದಲಿತರ ಮೇಲಿನ ದೌರ್ಜನ್ಯ, ದೇವಾಲಯ ಪ್ರವೇಶ ನಿರಾಕರಣೆ ಹಾಗೂ ಚಿಂತಾಮಣಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸಿರುವ ಕುರಿತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಊಲವಾಡಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕು ಆಡಳಿತ ವಿಫಲವಾದರೆ ದಲಿತರೊಂದಿಗೆ ತಾವೇ ದೇವಾಲಯ ಪ್ರವೇಶಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Chikkaballapur News: ಹಿರಿಯರ ಅನುಭವ ಹೊಸ ಪೀಳಿಗೆಗೆ ದಾರಿದೀಪವಾಗಲಿ: ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ

ಕಂಬಾಲಪಲ್ಲಿ ಕಹಿ ನೆನಪು ಮತ್ತೆ ಮುನ್ನೆಲೆಗೆ

ಚಿಂತಾಮಣಿ ತಾಲೂಕಿನ ಕಂಬಾಲಪಲ್ಲಿಯಲ್ಲಿ ಮಾರ್ಚ್ 11, 2000ರಂದು ಏಳು ದಲಿತರನ್ನು ಸಜೀವವಾಗಿ ಸುಟ್ಟು ಬೂದಿ ಮಾಡಿದ  ಜಾತಿ ಸಂಘರ್ಷದ ಘಟನೆ ಜಿಲ್ಲೆಯ ಸಾಮಾಜಿಕ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಘಟನೆಯ ಕುರಿತು ಸಂಸತ್ತಿನಲ್ಲಿಯೂ ಚರ್ಚೆ ಯಾಗಿತ್ತು. ಬಳಿಕ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಿರುವುದನ್ನು ಕರ್ನಾಟಕ ಹೈಕೋರ್ಟ್ ದಾಖಲಿಸಿದೆ.

ಈ ಹಿನ್ನೆಲೆಯಲ್ಲೇ ಊಲವಾಡಿ ದೇವಾಲಯ ಪ್ರವೇಶದ ಆರೋಪ ಮುನ್ನೆಲೆಗೆ ಬಂದಿರುವುದು ಸಾಮಾಜಿಕ ನ್ಯಾಯದ ವಿಚಾರವನ್ನು ಮತ್ತಷ್ಟು ಸೂಕ್ಷ್ಮಗೊಳಿಸಿದೆ. ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ದೂರುಗಳ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ವರದಿಯಾಗಿದೆ.

1cbpm7mla pradeep letter ಒಕ

ಗುರು–ಶಿಷ್ಯರ ರಾಜಕೀಯದಲ್ಲೂ ಬಿರುಕು?

2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಪ್ರದೀಪ್ ಈಶ್ವರ್ ಹಾಗೂ ಚಿಂತಾ ಮಣಿಯಿಂದ ಡಾ. ಎಂ.ಸಿ. ಸುಧಾಕರ್(Dr M C Sudhakar) ಇಬ್ಬರೂ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ದ್ದಾರೆ. ಪ್ರದೀಪ್ ಈಶ್ವರ್ ಅವರು ಸುಧಾಕರ್ ಅವರನ್ನು ತಮ್ಮ ರಾಜಕೀಯ ಗುರು ಎಂದು ಹಿಂದೆ ಉಲ್ಲೇಖಿಸಿದ್ದ ಹಿನ್ನೆಲೆಯಲ್ಲಿ, ಇದೀಗ ಇಬ್ಬರ ರಾಜಕೀಯ ಸಂಬಂಧದ ಕುರಿತು ಹೊಸ ಚರ್ಚೆ ಆರಂಭವಾಗಿದೆ ಎಂದು ಮಾಧ್ಯಮ ವರದಿಗಳು ವಿಶ್ಲೇಷಿಸಿವೆ.

ಊಲವಾಡಿ ವಿಚಾರದಲ್ಲಿ ಪ್ರದೀಪ್ ಈಶ್ವರ್ ಅವರ ಬಹಿರಂಗ ನಿಲುವು, ಸಾಮಾಜಿಕ ನ್ಯಾಯದ ಪ್ರಶ್ನೆ ಹಾಗೂ ಕಾಂಗ್ರೆಸ್‌ನೊಳಗಿನ ನಾಯಕತ್ವದ ಭಿನ್ನಾಭಿಪ್ರಾಯಗಳು ಒಂದೇ ಸಂದರ್ಭದಲ್ಲಿ ಚರ್ಚೆಗೆ ಬಂದಿವೆ.ಗುರುವಾರ ಚಿಂತಾಮಣಿಯಲ್ಲಿ ಪ್ರದೀಪ್ ಈಶ್ವರ್ ನಡೆಸಬೇಕಿದ್ದ ಸುದ್ದಿಗೋಷ್ಟಿ ಯೂ ಕೂಡ ದಿಢೀರ್ ಎಂದು ರದ್ಧಾಗಿರುವುದು, ಅದಕ್ಕೆ ಪ್ರದೀಪ್ ಈಶ್ವರ್ ಟ್ವಿಟ್ ಮೂಲಕ ಸಮಜಾಯಿಷಿ ನೀಡಿರುವುದು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಹೀಗಾಗಿ ದೇವಾಲಯ ಪ್ರವೇಶದ ಸಾಮಾಜಿಕ ಪ್ರಶ್ನೆ ಕಾಂಗ್ರೆಸ್‌ನ ಆಂತರಿಕ ರಾಜಕೀಯ ಸಮೀಕರಣಗಳಿಗೂ ಕನ್ನಡಿ ಹಿಡಿದಂತಾಗಿದೆ.

ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಪರಿಶೀಲನೆಯ ಫಲಿತಾಂಶವೇನು? ಊಲವಾಡಿ ದೇವಾಲಯ ಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗುತ್ತದೆಯೇ? ಈ ವಿಚಾರ ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿ ಪ್ರಾಯವನ್ನು ಮತ್ತಷ್ಟು ಗಾಢಗೊಳಿಸಲಿದೆಯೇ? ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯ ದಲ್ಲಿ ಚರ್ಚೆಯಾಗುತ್ತಿವೆ.