ಶಿಡ್ಲಘಟ್ಟ: ಪ್ರಧಾನ ಮಂತ್ರಿ ನೇತೃತ್ವದಲ್ಲಿ ಕಳೆದ 12 ವರ್ಷಗಳಲ್ಲಿ ಭಾರತ ಅಭಿವೃದ್ಧಿ, ರಾಷ್ಟ್ರೀ ಯ ಭದ್ರತೆ, ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ದೇಶವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವಲ್ಲಿ ಮೋದಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ( BJP District President Seekal Ramachandragowda) ಹೇಳಿದರು.
ನಗರದ ಕೋಟೆ ವೃತ್ತದಲ್ಲಿರುವ ಶ್ರೀ ರಾಮನ ದೇವಾಲಯದಲ್ಲಿ ಪ್ರಧಾನಿಯಾಗಿ ಮೋದಿ ಅವರು 12 ವರ್ಷಗಳ ಸೇವೆ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ, ಸ್ವಚ್ಛತಾ ಕಾರ್ಯ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯ ಕ್ರಮಗಳು ದೇಶದ ಪ್ರತಿಯೊಂದು ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ಸಂಸತ್ತಿನಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಹಲವು ಐತಿಹಾಸಿಕ ಮಸೂದೆಗಳು ಮತ್ತು ಕಾನೂನುಗಳು ಮೋದಿ ಅವರ ನೇತೃತ್ವದಲ್ಲಿ ಅಂಗೀಕಾರಗೊಂಡಿವೆ ಎಂದು ತಿಳಿಸಿದರು.
ಇದನ್ನೂ ಓದಿ: Shidlaghatta News: ಚಿಕ್ಕತೇಕಹಳ್ಳಿಯಲ್ಲಿ ಕೋಲಾಟದ ಸಂಭ್ರಮ; ಜನಮನ ಗೆದ್ದ ಜನಪದ ಕಲಾ ವೈಭವ
ಭಾರತ ಇಂದು ಡಿಜಿಟಲ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಡಿಜಿಟಲ್ ಇಂಡಿಯಾ(Digital India), ಸ್ಟಾರ್ಟ್ಅಪ್ ಇಂಡಿಯಾ(Startup India) ಮತ್ತು ಮೇಕ್ ಇನ್ ಇಂಡಿಯಾ(Make In India)ಸೇರಿದಂತೆ ವಿವಿಧ ಯೋಜನೆಗಳು ಯುವಜನತೆಗೆ ಹೊಸ ಅವಕಾಶ ಗಳನ್ನು ಕಲ್ಪಿಸಿವೆ. 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪ ದೊಂದಿಗೆ ಮೋದಿ ಅವರು ಕಾರ್ಯ ನಿರ್ವಹಿಸು ತ್ತಿದ್ದಾರೆ ಎಂದು ಹೇಳಿದರು.
ಬಳಿಕ ವಾಸವಿ ಶಾಲೆ ಆವರಣದಲ್ಲಿ “ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ರಾಮಚಂದ್ರಗೌಡ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ, ಶ್ರೀರಾಮ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ಮೋದಿ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ನಡೆಸಿ ಕಾರ್ಯಕರ್ತರು ಶುಭ ಹಾರೈಸಿದರು. ನಂತರ ದೇವಾಲಯದ ಆವರಣ ದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಸುರೇಂದ್ರ ಗೌಡ, ರೂಪಸಿ ರಮೇಶ್, ಡಾ.ಸತ್ಯನಾರಾಯಣ ರಾವ್, ಆಂಜನೇಯ ರೆಡ್ಡಿ ಪಂಕಜ್, ತ್ರಿವೇಣಿ, ಶ್ರೀದೇವಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತ ರಿದ್ದರು.