ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾದ ನಬಾರ್ಡ್ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಜಿಲ್ಲಾಡಳಿತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡದಿರುವುದು ಹಾಗೂ ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳು ಭಾಗವಹಿಸದೇ ಇರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಬಾರ್ಡ್ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಭಾಗವಹಿಸಿಲ್ಲ. ಈ ರೀತಿ ಜಿಲ್ಲೆಯ ಆಡಳಿತ ನಿರ್ವಹಣೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜಿಲ್ಲಾಡಳಿತದ ಒಬ್ಬ ಅಧಿಕಾರಿಯೂ ಕಾರ್ಯಕ್ರಮಕ್ಕೆ ಬಾರದೇ ಇರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅಧಿಕಾರಿಗಳು ಇಂತಹ ಬೇಜವಾಬ್ದಾರಿಯನ್ನು ಬಿಟ್ಟು ರೈತರ ಪರವಾಗಿ ಕೆಲಸ ಮಾಡಬೇಕು ಎಂದರು.
ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ. ನಾನು ಅಧಿಕಾರದಲ್ಲಿದ್ದರೆ ಇದರ ವಿರುದ್ಧ ಸ್ಥಳದಲ್ಲೇ ಅಮಾನತಿಗೆ ಕ್ರಮ ವಹಿಸುತ್ತಿದ್ದೆ. ಈ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೂ ತಿಳಿಸಿಲ್ಲ. ಇದನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದರು.
ರೈತರಿಗೆ, ಮಹಿಳಾ ಸಂಘಗಳಿಗೆ ಅನುಕೂಲ
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ನಬಾರ್ಡ್ ರಾಷ್ಟ್ರಮಟ್ಟದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ನಾನು ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಯ ಸದಸ್ಯನಾಗಿದ್ದು, ಈ ಬಗ್ಗೆ ಚರ್ಚೆ ಮಾಡಿದ್ದೆ. ಚಿಕ್ಕಬಳ್ಳಾಪುರ ರಚನೆಯಾಗಿ 17 ವರ್ಷವಾಗಿದ್ದು, ಪ್ರತ್ಯೇಕ ಶಾಖೆ ನಿರ್ಮಿಸಲು ಮನವಿ ಮಾಡಿದ್ದೆ. ಅದರಂತೆ ನಬಾರ್ಡ್ನ ಕಚೇರಿ ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗಿದೆ. ಅದಕ್ಕಾಗಿ ನಬಾರ್ಡ್ನ ಅಧ್ಯಕ್ಷರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ನೀರಿನ ಭದ್ರತೆ, ರೈತರ ಆದಾಯ ಹಾಗೂ ತಂತ್ರಜ್ಞಾನ ಮತ್ತು ಜ್ಞಾನ ಬಳಕೆ ಒಂದಾದರೆ ಚಿಕ್ಕಬಳ್ಳಾಪುರದ ಅಭಿವೃದ್ಧಿ ವೇಗವಾಗುತ್ತದೆ. ನಮ್ಮ ಜಿಲ್ಲೆಯ ರೈತರು ಬಹಳ ಶ್ರಮಪಟ್ಟು ಕೃಷಿ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ -2047ರ ಗುರಿ ತಲುಪಲು ವಿಕಸಿತ ಗ್ರಾಮದ ನಿರ್ಮಾಣವಾಗಬೇಕು. ದೇಶ ಅಭಿವೃದ್ಧಿಯಾಗಲು ಹಳ್ಳಿಗಳು ಬೆಳೆಯಬೇಕೆಂದು ಮಹಾತ್ಮ ಗಾಂಧೀಜಿ ಕೂಡ ಹೇಳಿದ್ದರು. ವಿಕಸಿತ ಗ್ರಾಮಗಳಿಂದ ವಿಕಸಿತ ಭಾರತದ ನಿರ್ಮಾಣ ವಾಗಬೇಕಿದ್ದು, ಇದರಲ್ಲಿ ನಬಾರ್ಡ್ನ ಪಾತ್ರ ಬಹಳ ಅಮೂಲ್ಯವಾಗಿದೆ. ಸಾಮಾನ್ಯ ಬ್ಯಾಂಕ್‌ಗಳಂತೆ ನಬಾರ್ಡ್ ಇರುವುದಿಲ್ಲ. ರೈತರು, ಮಹಿಳಾ ಸ್ವಸಹಾಯ ಸಂಘ, ಬೀದಿ ಬದಿ ವ್ಯಾಪಾರಿಗಳು, ಆಹಾರ ಉತ್ಪಾದಕ ಸಂಘಗಳಿಗೆ ನಬಾರ್ಡ್ನ ಬಾಗಿಲು ತೆರೆಯಬೇಕಾಗುತ್ತದೆ. ಈ ಮೂಲಕ ಅಭಿವೃದ್ಧಿ ಸಾಧ್ಯವಾಗುತ್ತದೆ. ನಬಾರ್ಡ್ನಿಂದ ಬಹಳ ಕಡಿಮೆ ದರದಲ್ಲಿ ಸಾಲ ದೊರೆಯುತ್ತದೆ ಎಂದರು.
ಕೋಲ್ಡ್ ಸ್ಟೋರೇಜ್ ನಿರ್ಮಿಸಿ
ಚಿಕ್ಕಬಳ್ಳಾಪುರ ಜಿಲ್ಲೆಯು ತರಕಾರಿ, ಹಣ್ಣು ಹಾಗೂ ಹೂ ಉತ್ಪನ್ನಗಳಿಗೆ ಹೆಸರು ಪಡೆದಿದೆ. ಈ ಉತ್ಪನ್ನಗಳು ಬೇಗ ಹಾಳಾಗುತ್ತದೆ. ಆದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕಿದ್ದು, ಈ ಬಗ್ಗೆ ನಬಾರ್ಡ್ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ 5,000 ಎಕರೆಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ದ್ರಾಕ್ಷಿ ಬೆಲೆ ಇಳಿಮುಖವಾದಾಗ ಅದನ್ನು ಸಂಗ್ರಹಿಸಿಟ್ಟು ವೈನ್ ಅಥವಾ ದ್ರಾಕ್ಷಾರಸ ತಯಾರಿಸಬೇಕು. ರೈತರಿಗೆ ಅಧಿಕ ಲಾಭ ಬರುವಂತೆ ಮಾಡಲು ಆಹಾರ ಸಂಸ್ಕರಣಾ ಕಾರ್ಖಾನೆಗಳನ್ನು ಆರಂಭಿಸಬೇಕು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ರೇಷ್ಮೆ ಹಾಗೂ ಹಾಲಿಗೆ ಜನಪ್ರಿಯವಾಗಿವೆ. ಈ ಅವಳಿ ಜಿಲ್ಲೆಗಳನ್ನು ಸಿಲ್ಕ್-ಮಿಲ್ಕ್ ಜಿಲ್ಲೆಗಳು ಎಂದು ಕರೆಯಲಾಗುತ್ತದೆ. ಆಹಾರ ಸಂಸ್ಕರಣೆ ಕಾರ್ಖಾನೆಗಳನ್ನು ಆರಂಭಿಸಲು ಕ್ರಮ ವಹಿಸಿದರೆ ನಾನು ಸಹಕಾರ ನೀಡುತ್ತೇನೆ ಎಂದರು.
ಈ ಭಾಗದಲ್ಲಿ 1200 ಕೆರೆಗಳ ಹೂಳು ತೆಗೆಯುವ ಅಗತ್ಯವಿದೆ. ಈ ಕಾರ್ಯಕ್ರಮಕ್ಕೆ ನಬಾರ್ಡ್ನಿಂದ ಆದ್ಯತೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಒಬ್ಬ ರೈತ ಸೇಬು ಕೂಡ ಬೆಳೆದಿದ್ದಾರೆ. ಜೊತೆಗೆ ಡ್ರ‍್ಯಾಗನ್ ಹಣ್ಣು, ದಾಳಿಂಬೆ ಬೆಳೆಯುತ್ತಿದ್ದು, ಅನೇಕ ಬೆಳೆಗಳು ರಫ್ತಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ಪೂರಕವಾದ ಮೂಲಸೌಕರ್ಯವನ್ನು ನಬಾರ್ಡ್ ಅಭಿವೃದ್ಧಿ ಮಾಡಬೇಕು ಎಂದರು.