ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್(MP Dr. K. Sudhakar) ಪ್ರತಿ ಸೋಮವಾರ ಜಿಲ್ಲಾ ಡಳಿತ ಭವನದ ಕಛೇರಿಯಲ್ಲಿ ನಡೆಸಿಕೊಡುತ್ತಿದ್ದ ಜನತಾದರ್ಶನ ಕಾರ್ಯಕ್ರಮವು ಬಡವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಇರುವ ಉತ್ತಮ ವೇದಿಕೆಯಾಗಿತ್ತು.ಸಂಸದರೇ ಜನತಾ ದರ್ಶನ ವನ್ನು ಮತ್ತೆ ಮುಂದುವರೆಸಿ ಬಡವರ ಪಾಲಿಗೆ ದೇವರಾಗಿ ಎಂದು ಸಮಾಜ ಸೇವಕ ಅಣಕನೂರು ಅನಂತಕುಮಾರ್ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಸಂಸದ ಡಾ.ಸುಧಾಕರ್ ಅವರು ಸಂಸದರಾದ ನಂತರ ಅವರ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದ ಜನತಾ ದರ್ಶನವು ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿತ್ತು.ಈ ಕಾರ್ಯಕ್ರಮಕ್ಕೆ ಸುಮಾರು 8 ರಿಂದ 10 ತಾಲೂಕುಗಳಿಂದ ಸಾರ್ವಜನಿಕರು, ಹಿರಿಯ ನಾಗರೀಕರು, ವಿದ್ಯಾರ್ಥಿಗಳು, ಹೆಣ್ಣುಮಕ್ಕಳು, ವಯಸ್ಸಾದವರು ತಮ್ಮ ಕಷ್ಟ ಸುಖಗಳನ್ನು ಹೊತ್ತು ಬರುತ್ತಿದ್ದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಾಣಿಸುತ್ತಿದ್ದರು.ಮತ್ತೊಂದಷ್ಟು ಕಾಲಮಿತಿಯಲ್ಲಿ ಪರಿಹಾರ ಆಗುತ್ತಿದ್ದವು. ಹೀಗಾಗಿ ಇಂತಹ ಕಾರ್ಯಕ್ರಮ ನಿಲ್ಲಬಾರದು ಎಂದರು.
ಇಂತಹ ಜನಪ್ರಿಯ ಕಾರ್ಯಕ್ರಮವು ಕಳೆದ ಎರಡು ಮೂರು ತಿಂಗಳಿಂದ ನಿಂತು ಹೋಗಿದೆ. ಪರಿಣಾಮವಾಗಿ, ನಿಮ್ಮನ್ನು ನೋಡಲು ಸಮಸ್ಯೆ ಹೇಳಿಕೊಳ್ಳಲು ಬರುವ ಬಡವರಿಗೆ ವೃದ್ಧರಿಗೆ ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ಬರಲು ಅನಾನುಕೂಲದಂತೆ ಕಷ್ಟಸಾಧ್ಯವಾಗಿದೆ. ಇದನ್ನು ಮನಗಂಡು ಸಂಸದರು ಈ ಕೂಡಲೇ ಜನತಾದರ್ಶನ ಪುನರಾರಂಭಿಸಬೇಕು. ಎಂದಿನಂತೆ ಬಡವರ ಅಸಹಾಯಕರ ಕುಂದುಕೊರತೆಗಳನ್ನು ಆಲಿಸಿ ನೆರವು ನೀಡಬೇಕು ಎಂದು ಮನವಿ ಕೋರಿದರು.