ಚಿಕ್ಕಬಳ್ಳಾಪುರ : ಅಂತ:ಕರಣದ ನಾಯಕತ್ವಕ್ಕೆ ಬಹುದೊಡ್ಡ ಮಾದರಿಯಂತಿರುವ ನಾಡು ಪ್ರಭು ಕೆಂಪೇಗೌಡರಿಗೆ ಗೌರವ ಕೊಡುವುದು ಸಮುದಾಯದ ಆದ್ಯತೆಯಾಗಬೇಕಿದೆ. ಪರಿಹಾರವಿಲ್ಲದ ಸಮಸ್ಯೆ ಯಾವುದೂ ಇರಲು ಸಾಧ್ಯವಿಲ್ಲ. ಸರಕಾರಿ ಕಾರ್ಯಕ್ರಮಕ್ಕೆ ತೊಂದರೆ ಕೊಡುವುದು ಶೋಭ ತರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಬೇಸರ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಡೋಣ ಸ್ವಾಮೀಜಿ ಮನವಿ ನಂತರ ಕಾರ್ಯಕ್ರಮ ನಡೆಯಿತು.
ಇತಿಹಾಸ ಜೀವಂತವಾಗಿ ಇರುವಷ್ಟೂ ಕಾಲ ನಾಡಪ್ರಭು ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಇರಲಿದೆ. ಕೆಂಪೇಗೌಡರು ನಡೆದಾಡಿದ ನಾಡಿನ ಎಲ್ಲಾ ಸ್ಥಳಗಳಲ್ಲಿಯೂ ಕೂಡ ವಿಜೃಂಭಣೆಯಿಂದ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು ನಗರದ ಈ ಕಾರ್ಯಕ್ರಮಕ್ಕೆ 15 ದಿನಗಳ ತಯಾರಿಯಿದ್ದು ಬೆಳಿಗ್ಗೆ 6 ಗಂಟೆಯಿಂದಯೇ ಹತ್ತಾರು ಇಲಾಖೆಗಳು, ಸಮುದಾಯದ ಮುಖಂಡರು, ಸಂಘಟನೆಗಳ ನಾಯಕರು ಸಿದ್ಧತೆ ಮಾಡಿಕೊಂಡಿದ್ದು ವೈಭವದಿಂದ ಮೆರವಣಿಗೆ ನಡೆದಿದೆ.
ಇದನ್ನೂ ಓದಿ: Chikkaballapur News: ಕೂಡಲೇ ನಿವೇಶನ ವಾಪಸ್ ಪಡೆಯಲು ಕುಡಾ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಒತ್ತಾಯ
517ನೇ ಜಯಂತಿ ಇದು. ಇಷ್ಟು ವರ್ಷ ಆದ್ರೂ ಯಾಕೆ ಜಯಂತಿ ಆಚರಣೆ ಮಾಡು ತ್ತಿದ್ದಾರೆ ಎಂಬ ಸತ್ಯ ತಿಳಿಯಬೇಕು. ಅನಗತ್ಯವಾಗಿ ಗಲಾಟೆ ಗದ್ದಲದ ಮೂಲಕ ಕಾರ್ಯಕ್ರಮವನ್ನು ಯಾರೂ ಹಾಳು ಮಾಡಬಾರದು. ಕೆಂಪೇಗೌಡರಿಗೆ ಕೊಡುವ ಗೌರವವೇ ಜಿಲ್ಲೆಗೆ ಕೊಡುವ ಗೌರವ ವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ 20 ಮಕ್ಕಳಿಗೆ, ಕೃಷಿ ಕ್ಷೇತ್ರ, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಲ್ಲಿಸ ಬೇಕಿದೆ. ಯಾವುದೋ ನೆಪವಿಟ್ಟುಕೊಂಡು ಕಾರ್ಯಕ್ರಮದ ಘನತೆ ಗೌರವಕ್ಕೆ ಕುಂದು ತರಬಾರದು ಎಂದು ಮನವಿ ಮಾಡಿದ ಅವರು ಗಾಂಧೀಜಿಯಂತಹ ದಿಟ್ಟ ನಾಯಕತ್ವವೇ ದೇಶದ ಸ್ವಾತಂತ್ರ‍್ಯ ಕ್ಕಾಗಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿತು.ಅಂತೆಯೇ ಕೆಂಪೇಗೌಡರ ಜಯಂತಿ ಕೂಡ ಸಮುದಾಯವನ್ನು ಬೆಸೆಯುವ ಕೆಲಸ ಮಾಡಬೇಕು ಎಂದರು.
ರೈತಕುಲ,ಬವರಿನ ಮಹಿಮೆ, ಕೃಷಿ ಸಂಸ್ಕೃತಿಗೆ ಕುವೆಂಪು ಗೌರವ ತಂದುಕೊಟ್ಟರು. ಅಂತೆಯೇ ನಾಡಪ್ರಭು ಕೆಂಪೇಗೌಡರು ಕೂಡ 512 ವರ್ಷಗಳಿಗೂ ಮೊದಲು ಬೆಂಗಳೂರು ನಗರ ಕಲ್ಪನೆಯ ಜತೆಗೆ ಮಾರುಕಟ್ಟೆ ನಿರ್ಮಾಣ ಮಾಡಿದರು. ರೈತನಿಗೆ ಭದ್ರತೆ ನೀಡಿದರು. ಅವರ ಈ ಸಂಕಲ್ಪ ಮೂಲೆ ಮೂಲೆಗಳಲ್ಲಿ ಪರಿಹರಿಸಬೇಕು ಎಂದು ಸಮುದಾಯದಲ್ಲಿ ಮನವಿ ಮಾಡುತ್ತೇನೆ. ಸರಕಾರ ೩೭ಮಹನೀಯರ ಜಯಂತಿ ಆಚರಣೆ ಮಾಡುತ್ತಿದೆ. ಈ ಎಲ್ಲಾ ಮಹನೀಯರ ಜೀವನ ಸಾಧನೆ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಆಗ ಮಾತ್ರ ಜಯಂತಿಗಳಿಗೆ ಸಾರ್ಥಕತೆ ಬರಲಿದೆ. ಎಲ್ಲರಿಗೂ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ ಪರಿಣಾಮವೇ ವೇದಿಕೆ ಕಾರ್ಯಕ್ರಮ ಗಂಟೆಗಳ ತಡವಾಗಿ ಆರಂಭಿಸಲಾಗಿದೆ ಇದನ್ನು ಅರಿಯಬೇಕು ಎಂದರು.
ರಾಜ ಪ್ರಭುತ್ವದಲ್ಲಿ ರಾಜರಾದವರು ತಮ್ಮ ವೈಯಕ್ತಿಕ ಬದುಕಿಗೆ ಅರಮನೆ ಗುರುಮನೆಗೆ ಮನ್ನಣೆ ನೀಡುವುದುಂಟು. ಆದರೆ ಜನಾನುರಾಗಿ ಪ್ರಭುವಾಗಿದ್ದ ಕೆಂಪೇಗೌಡ ಅರಮನೆ ಕಟ್ಟಲಿಲ್ಲ. ಬದಲಿಗೆ ಕೆರೆಬಾವಿ ಗೋಕಟ್ಟೆ, ಪೇಟೆಗಳನ್ನು ನಿರ್ಮಾಣ ಮಾಡಿದರು. ಈ ದೂರದೃಷ್ಟಿ ಇಂದಿನ ಆಡಳಿತಕ್ಕೆ, ಸರ್ಕಾರಕ್ಕೆ ಮಾದರಿ ಎಂದರು.
ಬೆಂಗಳೂರು ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.ರಾಜಕಾಲುವೆಗಳ ನಿರ್ಮಾಣ, 1500 ಕೆರೆಗಳ ನಿರ್ಮಾಣ ಮಾಡಿದ್ದಾರೆ. ಸಾರ್ವಜನಿಕರ ಉದ್ದೇಶಕ್ಕಾಗಿ ಉಚಿತವಾಗಿ ಭೂಮಿ ದಾನ ನೀಡಿದ ಕರ್ಣನಂತಹವರು ಜಿಲ್ಲೆಯಲ್ಲಿದ್ದು ಅವರನ್ನು ಗೌರವಿಸೋಣ ಎಂದು ಬಣ್ಣಿಸಿದರು.
ಸಮಾಜದಲ್ಲಿ ಒಕ್ಕಲಿಗ ಸಮುದಾಯಕ್ಕೆ ಗೌರವದ ಸ್ಥಾನಮಾನವಿದೆ. ಕೈ ಮುಗಿದು ಮನವಿ ಮಾಡು ತ್ತೇನೆ, ಶಾಂತಿ ಸುವ್ಯವಸ್ಥೆ ಕಾಪಾಡಿ, ಅಗೌರವ ತೋರಬಾರದು ಎಂದು ಹೇಳಿ ತಮ್ಮ ಭಾಷಣಕ್ಕೆ ವಿರಾಮ ನೀಡಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಂಗಳನಾಥ ಸ್ವಾಮೀಜಿ, ಬೆಂಗಳೂರನ್ನು 517 ವರ್ಷ ಗಳ ಹಿಂದೆ ಆತ್ಯಾಧುನಿಕವಾಗಿ ಕಟ್ಟಿದ್ದಾರೆ. ಒಕ್ಕಲಿಗರು ಉತ್ತರೆ ಮಾತ್ರ ದೇಶಕ್ಕೆ ಅನ್ನ ನೀಡುವ ಸಮುದಾಯವಾಗಿದೆ. ಒಕ್ಕಲಿಗ ಸಮುದಾಯ ನೀಡುವ ಸಮುದಾಯವೇ ವಿನಹ ಬೇಡುವ ಸಮುದಾಯವಲ್ಲ. ರಾಜ್ಯವನ್ನು ಆಳಿದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ನಮ್ಮ ಸಮುದಾಯ ದವರೇ, ವಿಧಾನಸೌಧ ವಿಕಾಸ ಸೌಧ ಕಟ್ಟಿದವರು,ನೀರಾವರಿ ಯೋಜನೆಗಳನ್ನು ತಂದವರು, ಕರ್ನಾಟಕಕ್ಕೆ ಪ್ರಧಾನಿಯಾಗಿ ಕೀರ್ತಿ ತಂದವರು, ಮುಖ್ಯಮಂತ್ರಿಗಳಾಗಿ ರಾಜ್ಯವನ್ನು ಅಭಿವೃದ್ಧಿ ಯತ್ತ ಕೊಂಡೊಯ್ದವರು ನಮ್ಮ ಸಮುದಾಯದ ನಾಯಕರೇ ಎಂಬುದನ್ನು ಮರೆಯಬಾರದು ಎಂದರು.
ಒಕ್ಕಲಿಗರೇ ಆಡಳಿತ ನಡೆಸುವುದು, ರಾಜಕೀಯ ಮಾಡುವುದು, ಧರ್ಮಕ್ಷೇತ್ರಗಳನ್ನು ನಡೆಸುವುದು, ಶಿಕ್ಷಣ ನೀಡುವುದು, ಸೇರಿ ಎಲ್ಲವನ್ನು ಅರಿತ ಯಾವುದಾದರೂ ಸಮುದಾಯ ಇದ್ದರೆ ಅದು ಒಕ್ಕಲಿಗ ಸಮುದಾಯ ಮಾತ್ರ.ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ದೊಡ್ಡ ಸಮುದಾಯದಲ್ಲಿ ಶಾಂತಿ ಇರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ಧಾರ್ಮಿಕ ಕ್ಷೇತ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಇದ್ದಾರೆ. ನಮ್ಮ ಮೇಲೆ ನಾನಾ ರೀತಿಯ ಹೇಳಿಕೆ, ಒತ್ತಡಗಳು ಬರುತ್ತವೆ. ಇವನ್ನೆಲ್ಲಾ ಸಹಿಸಿಕೊಂಡು ಹೋಗಬೇಕು. ಶ್ರಮಪಟ್ಟು ಗಳಿಸದನ್ನವನ್ನು ನಾವು ಉಣ್ಣುವ ಬದಲಿಗೆ ಸಿಟ್ಟಿನಲ್ಲೋ ಮತ್ಯಾವುದೋ ಕಾರಣಕ್ಕೆ ಇನ್ನೊಬ್ಬರು ಕಸಿದುಕೊಳ್ಳಲು ಬಿಡಬಾರದು ಎಂದು ಬಾಲಗಂಗಾಧರನಾಥ ಶ್ರೀಗಳು ಹೇಳುತ್ತಿದ್ದರು. ನಾವೆಲ್ಲಾ ಹಾಗೆ ಮಾಡೋಣ ಎಂದರು.
ಕೆಂಪೇಗೌಡ ಜಯಂತಿಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಭಾರೀ ಗದ್ದಲ ಗಲಾಟೆ, ಟೀಕೆ ಟಿಪ್ಪಣಿಗಳ ನಡುವೆ ಸಾವಧಾನದಿಂದಲೆ ಭಾಷಣ ಮಾಡಿದ್ದು ವಿಶೇಷವಾಗಿತ್ತು. 16ನೇ ಶತಮಾನದಲ್ಲಿದ್ದ ಸಾಂಸ್ಕೃತಿಕ ಅರಸು ಶ್ರೀಕೃಷ್ಣದೇವರಾಯನ ನಂಬಿಕಸ್ಥ ಸಾಮಂತ ನಾಗಿದ್ದ ಕೆಂಪೇಗೌಡರು ನಿಮಗೂ ನನಗೂ ಎಲ್ಲರಿಗೂ ನಾಡಪ್ರಭುವೇ ಆಗಿದ್ದಾರೆ. ಸಾವಿರ ನದಿಗಳ ನಾಡು ಎಂದೇ ಖ್ಯಾತಿಯಾಗಿದ್ದ ಬೆಂಗಳೂರನ್ನು ಕಟ್ಟಿ ಅದರಲ್ಲಿ 64 ಕುಲಕಸುಬುಗಳ ನೆರವಿಗೆ ಪೇಟೆಗಳ ನಿರ್ಮಾಣ, 1500ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ ಮಾಡಿದ್ದರು.
ರಕ್ಕಸತಂಗಡಿ ಯುದ್ದಕ್ಕೆ ಶ್ರೀಕೃಷ್ಣದೇವರಾಯ ಕೆಂಪೇಗೌಡರನ್ನು ಕಳಿಸಿದಾಗ ಅವರಿಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆಗ ಅವರಿಗೆ ಒಳ್ಳೆಯದಾಗಲಿ ಆರೋಗ್ಯ ಸುಧಾರಣೆ ಆಗಲಿ ಎಂದು ನಾಡಿನ ಜನತೆ ತಿರುಪತಿ ವೆಂಕಟೇಶ್ವರನಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಈ ವಿಚಾರ ಕುಣಿಗಲ್ ದೇವಾಲಯದಲ್ಲಿರುವ ಶಾಸನದಲ್ಲಿ ಇಂದಿಗೂ ಉಲ್ಲೇಖವಾಗಿದೆ ಎಂದರು.
ಶ್ರೀಕೃಷ್ಣದೇವರಾಯರ ವಂಶಸ್ಥರ ಅನುಮತಿ ಪಡೆದು ಕಟ್ಟಿದ ಬೆಂಗಳೂರು ಇಂದು ವಿಶ್ವಮಾನ್ಯ ವಾಗಿದೆ. ನಿರ್ಮಲಾನಂದನಾಥ ಶ್ರೀಗಳು ಜಿಲ್ಲೆಗೆ ಕೊಟ್ಟ ಕೊಡುಗೆ ದೊಡ್ಡದು. ಕೆಂಪೇಗೌಡರು ಅವರು ನಿಮಗೆ ಹೇಗೋ ನಮಗೂ ಕೂಡ ಅವರು ನಾಡಪ್ರಭುಗಳೇ ಆಗಿದ್ದಾರೆ. ನಾನು ಕೆಂಪೇ ಗೌಡರು ಹೇಗಿದ್ದರು ಎಂದು ನೋಡಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರಲ್ಲಿ ಕೆಂಪೇಗೌಡರನ್ನು ಕಂಡಿದ್ದೇನೆ. ನಾನು ನೋಡೊರೋ ಕೆಂಪೇಗೌಡರು ನನ್ನ ನಾಯಕ ಡಿ.ಕೆ.ಶಿವಕುಮಾರ್ ಅವರೇ ಎಂದರು.
ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಹೆಗ್ಗಳಿಕೆ ಹೇಗಿದೆ ಎಂದರೆ ದೇಶದ ಶೇ.35ರಷ್ಟು ಆದಾಯ ಬೆಂಗಳೂರು ಒಂದರಿಂದಲೇ ಉತ್ಪತ್ತಿ ಆಗುತ್ತಿದೆ.ಇಂತಹ ನಾಡಪ್ರಭು ಕೆಂಪೇಗೌಡರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. 15 ಮತ್ತು 16ನೇ ಶತಮಾನ ಶ್ರೀಕೃಷ್ಣದೇವರಾಯರ ಆಡಳಿತಕ್ಕೆ ಹೆರುವಾಸಿ, ಕೆಂಪೇಗೌಡರ ಆಡಳಿತದ ಸ್ಪೂರ್ತಿಯಯೇ ಶ್ರೀಕೃಷ್ಣದೇವರಾಯ ಆಗಿದ್ದರು. 217ವರ್ಷಗಳು ಕಳೆದರೂ ಶ್ರೀಕೃಷ್ಣದೇವರಾಯರ ಆಡಳಿತ ದಕ್ಷಿಣ ಭಾರತಕ್ಕೆ ಸ್ಪೂರ್ತಿಯಾಗಿದೆ ಎಂದರೆ ಕೃಷ್ಣದೇವರಾಯರ ಜನಪರ ಆಡಳಿತ, ಆಡಳಿತದಲ್ಲಿನ ಪ್ರಾಮಾಣಿಕತೆ ಸಾಕ್ಷಿ ಎನ್ನುತ್ತಾ ಮಾತು ಮುಗಿಸಿದರು.
ಶಾಸಕರು ಭಾಷಣ ಪ್ರಾರಂಭಿಸುತ್ತಿದ್ದಂತೆ ಗದ್ದಲ ಜೋರಾಯಿತು. ಹುಚ್ಚ, ಹುಚ್ಚ, ಹುಚ್ಚ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಮಾತು ನಿಲ್ಲಿಸೋ ಎಂಬ ಏಕವಚನ ಪ್ರಯೋಗಗಳೂ ಜೋರಾಗಿಯೇ ಕೇಳಿಬಂದವು. ವೇದಿಕೆಯಿಂದ ಕೆಳಗಿಸಿ, ಅವರಿಗೆ ಮಾತನಾಡಲು ಅವಕಾಶ ನೀಡಬೇಡಿ ಎಂಬ ಮಾತುಗಳೂ ಮೊಳಗಿದವು.ಯಾವುದಕ್ಕೂ ಸೊಪ್ಪು ಹಾಕದೆ ನಿರುಮ್ಮಳವಾಗಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಭಾಷಣದ ಕೊನೆಗೆ ಜೈಕೆಂಪೇಗೌಡ, ಜೈ ಅಂಬೇಡ್ಕರ್, ಜೈವಾಲ್ಮೀಕಿ ಎನ್ನುತ್ತಾ ತಮ್ಮ ಎಂದಿನ ಶೈಲಿಯಲ್ಲಿ ಭಾಷಣ ಮುಗಿಸಿದರು. ಇದೇ ವೇಳೆ, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದರು ಮಾತನಾಡಿದರು.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದು ಗಂಗಾಧರ್, ಕರ್ನಾಟಕ ರಾಜ್ಯ ಬೀಜ ನಿಗಮ ಅಧ್ಯಕ್ಷ ಆಂಜಿನಪ್ಪ, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾ ಮಂಡಳಿಯ ಅಧ್ಯಕ್ಷ ಬಿ.ಜೆ.ಗಣೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಸಮುದಾಯದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.