ಚಿಕ್ಕಬಳ್ಳಾಪುರ, ಫೆ. 6: ಪ್ರೇಮಿಗಳು ಬಹು ದಿನಗಳಿಂದ ಕುತೂಹಲ, ನಿರೀಕ್ಷೆಯಿಂದ ಎದುರು ನೋಡುತ್ತಿರುವ ದಿನ ಇನ್ನೇನು ಬಂದೇ ಬಿಟ್ಟಿತು. ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುವ ವ್ಯಾಲೆಂಟೈನ್ಸ್ ಡೇ (Valentine’s Day) ಪ್ರತಿ ಪ್ರೇಮಿಗಳಿಗೆ ವಿಶೇಷ ದಿನ. ಅಂದು ತಮ್ಮ ಸಂಗಾತಿಯೊಂದಿಗೆ ವಿಶಿಷ್ಟವಾಗಿ ಪ್ರೇಮಿಗಳ ದಿನ ಕೊಂಡಾಡಲು ತಿಂಗಳ ಮೊದಲೇ ಸಿದ್ಧತೆ ಆರಂಭವಾಗುತ್ತದೆ. ಅದರಲ್ಲಿಯೂ ಪ್ರಕೃತಿ ಮಡಿಲಿಗೆ ಹೋಗಿ ಪ್ರೇಮಿಯೊಂದಿಗೆ ಏಕಾಂತದಲ್ಲಿ ಸಮಯ ಕಳೆಯುವುದೆಂದರೆ ಬಹುತೇಕರಿಗೆ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಅಂದು ನಿಸರ್ಗ ರಮಣೀಯ ಪ್ರವಾಸಿ ತಾಣಗಳು ಪ್ರೇಮಿಗಳ ಕಲರವದಿಂದ ಕೂಡಿರುತ್ತದೆ. ಅಂತಹ ಸ್ಥಳಗಳಲ್ಲಿ ಚಿಕ್ಕಬಳ್ಳಾಪುರದ ನಂದಿ ಬೆಟ್ಟವೂ (Nandi Hills) ಒಂದು. ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ನಂದಿ ಬೆಟ್ಟಕ್ಕೆ ಸಂಗಾತಿ ಸಮೇತ ಅನೇಕರು ಭೇಟಿ ನೀಡಲು ಮುಂದಾಗುತ್ತಾರೆ. ಆದರೆ ಜಿಲ್ಲಾಡಳಿತ ಈ ಬಾರಿ ಅಂತಹವರಿಗೆ ಬಿಗ್ ಶಾಕ್ ನೀಡಿದೆ (Chikkaballapur News). ಅದೇನು ಎನ್ನುವ ವಿವರ ಇಲ್ಲಿದೆ.
ಹೌದು, ಫೆಬ್ರವರಿ 14ರಂದು ವಿಶ್ವವಿಖ್ಯಾತ ನಂದಿಗಿರಿಧಾಮ ಬಂದ್ ಆಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ''ಫೆಬ್ರವರಿ 14ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿ ಗಿರಿಧಾಮ ಬಂದ್ ಆಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಈ ಕ್ರಮ ಕೈಗೊಳ್ಳಲಾಗಿದೆʼʼ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.
ನಂದಿ ಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
ಆದೇಶ ಪತ್ರದಲ್ಲಿ ಏನಿದೆ?
ಈ ಬಗ್ಗೆ ಅಧಿಕೃತ ಆದೇಶ ಪತ್ರ ಹೊರಡಿಸಲಾಗಿದೆ. ಪ್ರೇಮಿಗಳ ದಿನ ಶನಿವಾರವಾಗಿರುವುದರಿಂದ 15-20 ಸಾವಿರ ಪ್ರವಾಸಿಗರು, ಪ್ರೇಮಿಗಳು ಹಾಗೂ 5-6 ಸಾವಿರ ವಾಹನಗಳು ಆಗಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ನಂದಿ ಗಿರಿಧಾಮದ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಅತೀ ಕಷ್ಟ. ಅಪಘಾತಗಳಾಗುವ ಸಾಧ್ಯತೆಯೂ ಹೆಚ್ಚು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಪ್ರೇಮಿಗಳ ದಿನವನ್ನು ಆಚರಿಸುವ ಪ್ರಯುಕ್ತ ಹೊರಗಡೆಯಿಂದ ಬರುವ ಪ್ರೇಮಿಗಳು, ಸಾರ್ವಜನಿಕರು ರಾತ್ರಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯವಾಗಿ ವರ್ತಿಸುವ ಸಾಧ್ಯತೆ ಇದೆ. ಮಹಿಳೆಯರು ಮತ್ತು ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅಮಲಿನಲ್ಲಿ ಪುಂಡರು ಅಸಭ್ಯವಾಗಿ ವರ್ತಿಸುವುದು, ಇತರ ಪ್ರವಾಸಿಗರಿಗೆ ತೊಂದರೆ ನೀಡುವುದು ಹಾಗೂ ಬೆಟ್ಟದ ಮೇಲೆ ನಿಷೇಧಿತ ಅಪಾಯಕರ ಸ್ಥಳಗಳಿಗೆ ಹೋಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೂ ಅನಾಹುತಗಳಾಗುತ್ತವೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಫೆಬ್ರವರಿ 14ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಸದ್ಯ ಸರ್ಕಾರದ ಈ ನಿರ್ಧಾರ ಪ್ರೇಮಿಗಳಿಗೆ ನಿರಾಸೆ ತಂದಿದೆ. ಈಆಗಲೇ ನಂದಿಬೆಟ್ಟಕ್ಕೆ ತೆರಳುವ ಪ್ಲ್ಯಾನ್ ಮಾಡಿದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.