ಚಿಕ್ಕಬಳ್ಳಾಪುರ : ಪಶ್ಚಿಮ ಬಂಗಾಳ ತಮಿಳುನಾಡು ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಲಾಭ ಪಡೆಯುವ ದುರಾಸೆ ಮತ್ತು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಬಿಜೆಪಿ ತರಾತುರಿಯಲ್ಲಿ ನಾರೀವಂದನಾ ಮಹಿಳಾ ಮೀಸಲಾತಿ ಮಸೂದೆ(Narivandana Women's Reservation Bill) ತರಲು ಯತ್ನಿಸಿತು. ಮೇಲಾಗಿ ಇದನ್ನು ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಜತೆ ಜೋಡಿಸಿದ್ದ ಕಾರಣ ಸೋಲಾಯಿತೇ ವಿನಃ ಕಾಂಗ್ರೆಸ್ ಪಕ್ಷದ ಕಾರಣವಾಗಿ ಅಲ್ಲ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ(Karnataka Region Mahila Congress State President Soumya Reddy) ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ನಾರೀ ವಂದನಾ ಮಹಿಳಾ ಮೀಸಲಾತಿ ಮಸೂದೆ ಪಾಸ್ ಮಾಡಲು ಬೇಕಾದ ಸಂಖ್ಯಾಬಲ ಬಿಜೆಪಿಗೆ ಇರಲಿಲ್ಲ ಎಂಬುದು ಅವರಿಗೆ ಗೊತ್ತಿದ್ದರೂ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆ ಯುತ್ತಿರುವ ಚುನಾವಣೆಯಲ್ಲಿ ಲಾಭ ಪಡೆಯುವ ಏಕೈಕ ಉದ್ದೇಶದಿಂದ ಇದನ್ನು ತರಾತುರಿಯಲ್ಲಿ ಮಂಡಿಸಿ ಸೋಲಾಗುವಂತೆ ಮಾಡಲಾಯಿತು. ಮುದುವರೆದು ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿರೋಧಿ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡುವ ಮೂಲಕ ತನ್ನ ಮನೋಗತ ಈಡೇರಿಸಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ: Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಈ 13 ವರ್ಷಗಳಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿಸುವುದು, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರ ಮನಸ್ಸಿನಲ್ಲಿ ವಿಷತುಂಬುವ ಕೆಲಸ ಮಾಡಲಾಗುತ್ತಿದೆ.ಕಾಂಗ್ರೆಸ್ ಎಂದೂ ಕೂಡ ಮಹಿಳಾ ಮೀಸಲಾತಿ ವಿರೋದಿ ಅಲ್ಲವೇ ಅಲ್ಲ,ಇದು ಜನತೆಗೆ ಗೊತ್ತಿದೆ. ಬಿಜೆಪಿ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ ಎಂದು ಟೀಕಿಸಿದರು.
2023ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲಾಗಿದೆ. ಪ್ರಸ್ತುತ ಲೋಕಸಭೆಯಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ಮೀಸಲಾತಿ ನೀಡಿದರೆ ಕಾಂಗ್ರೆಸ್ ವಿರೋಧಿಸುವು ದಿಲ್ಲ. ಆದರೆ ಯಾವುದೇ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೇ ತರಾತುರಿಯಲ್ಲಿ ಮಸೂದೆ ಜಾರಿಗೆ ತರಲು ಮತ್ತು ಅದರ ಜೊತೆಗೆ ಕ್ಷೇತ್ರ ಮರು ವಿಂಗಡಣೆ (ಡಿಲಿಮಿಟೇಶನ್) ಮಾಡಲು ಮುಂದಾಗಿರುವುದು ಸರಿಯಲ್ಲ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾಗುವ ಮೂಲಕ ಬಿಜೆಪಿ ರಾಜಕೀಯ ಲಾಭ ಪಡೆಯಲು ಡಿಲಿಮಿಟೇಶನ್ ನಡೆಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಮಹಿಳಾ ಮೀಸಲಾತಿ ಮಸೂದೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಬಾರದೆಂಬುದು ಕಾಂಗ್ರೆಸ್ ನಿಲುವಾಗಿದೆ. ಆದರೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಕ್ಷೇತ್ರ ಮರು ವಿಂಗಡಣೆ ಮಾಡುವ ಉದ್ದೇಶ ಬಿಜೆಪಿಯದ್ದಾಗಿದೆ.ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿ ಕೂಟವೂ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಲು ಬಿಜೆಪಿ ಯತ್ನಿಸುತ್ತಿದ್ದು, ಮಹಿಳೆಯರು ಅದನ್ನು ಒಪ್ಪುವುದಿಲ್ಲ.ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಈಗಿರುವ ಸಂಖ್ಯೆಯಲ್ಲೇ ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮಹಿಳೆಯರ ಬಗ್ಗೆ ಬಿಜೆಪಿ ತೋರಿಸುತ್ತಿರುವ ಕಾಳಜಿ ಕೇವಲ ಮಾತಿನ ಮಟ್ಟದಲ್ಲೇ ಉಳಿದಿದೆ. ಉನ್ನಾವ್ ಪ್ರಕರಣ, ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಮಾನವೀಯ ಘಟನೆಗಳ ಬಗ್ಗೆ ಬಿಜೆಪಿ ಮೌನವಾಗಿದೆ. ಮೂರು ವರ್ಷಗಳಿಂದ ಮಣಿಪುರದಲ್ಲಿ ಅಶಾಂತಿ ಮುಂದುವರಿದಿದ್ದರೂ ಈ ಬಗ್ಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ.‘ಬೇಟಿ ಬಚಾವ್, ಬೇಟಿ ಪಡಾವ್’ ಎಂಬುದು ಕೇವಲ ಘೋಷಣೆಯಷ್ಟೇ ಆಗಿದೆ ಎಂದು ಸೋಮ್ಯ ರೆಡ್ಡಿ ಆರೋಪಿಸಿದರು.
ಕಾಂಗ್ರೆಸ್ ಸದಾ ಮಹಿಳೆಯರ ಪರ ನಿಂತಿದೆ.ಪ್ರಸ್ತುತ ಲೋಕಸಭೆಯಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಸಿದ್ಧವಾಗಿದೆ.ಆದರೆ ಈ ಬಗ್ಗೆ ಬಿಜೆಪಿಗೆ ಇಚ್ಛಾಶಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್. ಕೇಶವ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ಲಾಯರ್ ನಾರಾಯಣಸ್ವಾಮಿ, ಬಾಬಾಜಾನ್, ಪೆದ್ದಣ್ಣ, ಮೀನು ಗಾರರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಗಳಪ್ರಕಾಶ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ನಾರಾಯಣಮ್ಮ, ಪೆದ್ದಣ್ಣ, ಜಿಲ್ಲಾ ಮಮಹಿಳಾ ಕಾಂಗ್ರೆಸ್‌ನ ಹಸೀನ ಬಾನು,ನಗರಸಭಾ ನಾಮ ನಿದೇಶಿತ ಸದಸ್ಯೆ ಅಣ್ಣಮ್ಮ, ಸರೋಜಮ್ಮ, ಲಕ್ಷ್ಮಿ ದೇವಿ, ನಿರ್ಮಲ ದೇವಿ, ವಸಂತ, ಅನುಸೂಯ, ರತ್ನಮ್ಮ, ವಿಜಯಲಕ್ಷ್ಮಿ, ಫಸಲುನ್ನಿಸ, ಹನುಮಕ್ಕ, ಕೆ.ಎನ್ ರತ್ನಮ್ಮ, ಗಂಗರತ್ನ, ರತ್ನಮ್ಮ ಮತ್ತಿತರರು ಇದ್ದರು.