ಗುಡಿಬಂಡೆ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಎನ್‌ಡಿಎ (NDA) ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿದ್ದು, ಬೂತ್ ಮಟ್ಟದಿಂದಲೇ ಪಕ್ಷದ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಸಮಾಜ ಸೇವಕ ಹರಿನಾಥ್ ರೆಡ್ಡಿ ತಿಳಿಸಿದರು.
ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎನ್‌ಡಿಎ ಮುಖಂಡರು ಸಭೆ ಸೇರಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿನಾಥ್ ರೆಡ್ಡಿ, ಸಂಸದ ಕೆ. ಸುಧಾಕರ್(MP K Sudhakar) ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(H D Kumaraswamy) ಅವರ ನಿರ್ದೇಶನದಂತೆ ಮುಂದಿನ ಚುನಾವಣೆಗಳನ್ನು ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಕಳೆದ 15 ವರ್ಷಗಳಿಂದ ಈ ಭಾಗದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಎನ್‌ಡಿಎ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತವಾಗಿ ಶ್ರಮಿಸಲಿದ್ದಾರೆ. ಸಂಘಟನೆಯ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೇಶವರೆಡ್ಡಿ, ಕೊನಪ್ಪರೆಡ್ಡಿ ಹಾಗೂ ರಾಮಲಿಂಗಪ್ಪ ಸೇರಿದಂತೆ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸ ಲಾಗುವುದು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕಾರ್ಯಕರ್ತರನ್ನು ಸಂಘಟಿಸುವುದು, ಬೂತ್ ಮಟ್ಟದಲ್ಲಿ ಪಕ್ಷದ ನೆಲೆಯನ್ನು ಬಲಪಡಿಸುವುದು ಹಾಗೂ ಮತದಾರರನ್ನು ತಲುಪುವ ಕಾರ್ಯ ಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್. ಮಂಜುನಾಥರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ರೆಡ್ಡಿ, ಎನ್‌ಡಿಎ ಮುಖಂಡರಾದ ಜೆ.ಪಿ. ಚಂದ್ರಶೇಖರ್, ಎ.ವಿ.ಟಿ. ನಾರಾಯಣಸ್ವಾಮಿ, ಶಿವಣ್ಣ, ರಾಜಣ್ಣ, ಚಲಪತಿ, ಜಿ.ಟಿ. ವೆಂಕಟೇಶ್, ವೇಣುಗೋಪಾಲ್, ಬಾಬು ರೆಡ್ಡಿ, ಸುರೇಂದ್ರ ರೆಡ್ಡಿ, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.