ಚಿಕ್ಕಬಳ್ಳಾಪುರ: ಸಾರ್ವಜನಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಗುಣಮಟ್ಟದ ಹಾಗೂ ತ್ವರಿತ ಆರೋಗ್ಯ ಸೇವೆ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ನವೀನ್ ಭಟ್ ವೈ.ಭಾ.ಆ.ಸೇ. ಅಧಿಕಾರಿಗಳಿಗೆ ಸೂಚಿಸಿದರು.
ಆಗಸ್ಟ್ 7ರಂದು ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳ (NCD) ವಿಭಾಗ, ಜಿಲ್ಲಾ ಪ್ರಯೋಗಾಲಯ, ಕರ್ನಾಟಕ ಬ್ರೈನ್ ಹೆಲ್ತ್ ಇನಿಷಿಯೇಟಿವ್ (KABHAI) ಹಾಗೂ ನೇತ್ರ ವಿಭಾಗಗಳನ್ನು ಪರಿಶೀಲಿಸಿದರು.
KABHAI ಕಾರ್ಯಕ್ರಮದಡಿ ನ್ಯೂರೋಲಾಜಿಸ್ಟ್ ಅಥವಾ ಫಿಜಿಷಿಯನ್ ಅಗತ್ಯವಿದ್ದು, ಸೂಕ್ತ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಆಶಾಕಿರಣ ಕಾರ್ಯಕ್ರಮದ ದೃಷ್ಟಿಕೇಂದ್ರಕ್ಕೆ ಭೇಟಿ ನೀಡಿ, ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಕಣ್ಣಿನ ಚಿಕಿತ್ಸೆ, ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣೆಯ ದಾಖಲೆಗಳನ್ನು ಪರಿಶೀಲಿಸಿದರು. ಅಗತ್ಯ ಸೇವೆಗಳನ್ನು ಅರ್ಹರಿಗೆ ಸಮರ್ಪಕವಾಗಿ ಒದಗಿಸುವಂತೆ ಸೂಚಿಸಿದರು.
ಇದನ್ನೂ ಓದಿ: Chikkaballapur News: ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ: ವೇದಮೂರ್ತಿ ವಿರುದ್ಧ ಕ್ರಮಕ್ಕೆ ದೂರು
ಜಿಲ್ಲಾಸ್ಪತ್ರೆಯಲ್ಲಿ ಕಾರ್ನಿಯಾ ಕಸಿ (Corneal Transplantation) ಚಿಕಿತ್ಸೆಗೆ ಸಂಬಂಧಿಸಿದ ವೈದ್ಯರು ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ, ಬೆಂಗಳೂರು ಮಿಂಟೋ ಆಸ್ಪತ್ರೆಗೆ ಸೇರಿದ ತಜ್ಞ ವೈದ್ಯರನ್ನು ನಿಯೋಜಿಸುವ ಕುರಿತು ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಗತ್ಯ ಔಷಧಿಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ರಾಜ್ಯಮಟ್ಟದ ಅಧಿಕಾರಿಗಳಿಗೆ ಪತ್ರ ರವಾನಿಸುವ ಬಗ್ಗೆಯೂ ಚರ್ಚೆ ನಡೆಯಿತು.
ನಂತರ ಜಿಲ್ಲಾ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಸಿಇಒ, ಸಾರ್ವಜನಿಕರಿಗೆ ಅಗತ್ಯವಿರುವ ರಕ್ತ ಪರೀಕ್ಷೆಗಳ ವರದಿಯಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ನಂದಿ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಮತ್ತು ನಿರ್ದೇಶಕರು, ಆರ್‌ಎಂಒ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ, ಜಿಲ್ಲಾ ಮಲೇರಿಯಾ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಜಿಲ್ಲಾಸ್ಪತ್ರೆಯ ವೈದ್ಯರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.