ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರಾವಣದಲ್ಲೂ ಹೂವಿಗೆ ಬೆಲೆ ಇಲ್ಲ: ತೋಟದಲ್ಲೇ ಅರಳಿ, ತೋಟದಲ್ಲೇ ಕಮರುತ್ತಿವೆ ರೈತರ ಕನಸುಗಳು

ರಾಜ್ಯದಲ್ಲೇ ಪ್ರಮುಖ ಹೂವಿನ ಮಾರುಕಟ್ಟೆ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಪುಷ್ಪಕೃಷಿಯನ್ನು ಅವಲಂಬಿಸಿದ್ದಾರೆ. ನೀರಾವರಿ ಕೊರತೆ ಹಾಗೂ ಬರದ ನಡುವೆಯೂ ದಿನನಿತ್ಯದ ಆದಾಯದ ನಿರೀಕ್ಷೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಹೂವಿನ ಕೃಷಿಯತ್ತ ಮುಖ ಮಾಡಿದ್ದಾರೆ. ಆದರೆ ಇದೀಗ ಮಾರುಕಟ್ಟೆ ದರ ಕುಸಿತವೇ ಅವರ ಬದುಕಿಗೆ ದೊಡ್ಡ ಹೊಡೆತ ನೀಡಿದೆ.

ಮುನಿರಾಜು ಎಂ. ಅರಿಕೆರೆ

ಚಿಕ್ಕಬಳ್ಳಾಪುರ: ಹಬ್ಬಗಳ ಮಾಸವಾದ ಶ್ರಾವಣದಲ್ಲಿ ಹೂವಿಗೆ ಬೇಡಿಕೆ ಹೆಚ್ಚಬೇಕಿತ್ತು. ಹೂವಿನ ತೋಟಗಳಲ್ಲಿ ನಗು ಅರಳಬೇಕಿತ್ತು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರ ಪಾಲಿಗೆ ಈ ಶ್ರಾವಣ ಕಣ್ಣೀರಿನ ಮಾಸವಾಗಿ ಪರಿಣಮಿಸಿದೆ. ಕಳೆದ ಎರಡು ವಾರಗಳಿಂದ ಹೂವಿನ ಬೆಲೆ ದಿಢೀರ್ ಕುಸಿದಿದ್ದು, ಉತ್ತಮ ಗುಣಮಟ್ಟದ ಹೂವುಗಳಿಗೂ ನಿರೀಕ್ಷಿತ ಬೆಲೆ ಸಿಗದೆ ರೈತರು ತೋಟದಲ್ಲೇ ಹೂವು ಬಿಡುವ ಅಥವಾ ಮಾರುಕಟ್ಟೆಗೆ ತಂದು ಮಾರಾಟವಾಗದೆ ಕಸದ ರಾಶಿಗೆ ಸುರಿಯುವ ಪರಿಸ್ಥಿತಿ ಎದುರಾಗಿದೆ.

ರಾಜ್ಯದಲ್ಲೇ ಪ್ರಮುಖ ಹೂವಿನ ಮಾರುಕಟ್ಟೆ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಪುಷ್ಪಕೃಷಿಯನ್ನು ಅವಲಂಬಿಸಿದ್ದಾರೆ. ನೀರಾವರಿ ಕೊರತೆ ಹಾಗೂ ಬರದ ನಡುವೆಯೂ ದಿನನಿತ್ಯದ ಆದಾಯದ ನಿರೀಕ್ಷೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಹೂವಿನ ಕೃಷಿಯತ್ತ ಮುಖ ಮಾಡಿದ್ದಾರೆ. ಆದರೆ ಇದೀಗ ಮಾರುಕಟ್ಟೆ ದರ ಕುಸಿತವೇ ಅವರ ಬದುಕಿಗೆ ದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: Lalbagh flower show: ತೇಜಸ್ವಿ ವಿಸ್ಮಯ ಫ್ಲವರ್‌ ಶೋಗೆ ತೆರೆ, 8.10 ಕೋಟಿ ಜನ ಭೇಟಿ, ದಾಖಲೆ 2.46 ಕೋಟಿ ರೂ. ಸಂಗ್ರಹ

ಬೆಲೆ ಇದೆ... ಆದರೆ ರೈತನ ಕೈಗೆ ಹಣವಿಲ್ಲ!

ಪುಷ್ಪಕೃಷಿ ಹೊರನೋಟಕ್ಕೆ ಆಕರ್ಷಕವಾಗಿದ್ದರೂ ಅದರ ಹಿಂದೆ ರೈತರ ಅಪಾರ ಶ್ರಮವಿದೆ. ಹೂ ಬಿಡಿಸಲು ಪ್ರತಿದಿನ ಕೂಲಿ ಕಾರ್ಮಿಕರ ಅಗತ್ಯವಿದ್ದು, ರೋಗ ಮತ್ತು ಕೀಟಬಾಧೆ ಹೆಚ್ಚಿರುವು ದರಿಂದ ಆಗಾಗ ಔಷಧಿ ಸಿಂಪಡಿಸಬೇಕಾಗುತ್ತದೆ. ನೀರು, ಗೊಬ್ಬರ, ಔಷಧಿ, ಕೂಲಿ, ಕೊಯ್ಲು, ಪ್ಯಾಕಿಂಗ್ ಹಾಗೂ ಮಾರುಕಟ್ಟೆಗೆ ಸಾಗಣೆ ಸೇರಿದಂತೆ ಪ್ರತಿ ಹಂತದಲ್ಲೂ ರೈತರಿಗೆ ವೆಚ್ಚವಾಗುತ್ತದೆ.

ಆದರೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ದರ ಈ ವೆಚ್ಚವನ್ನೇ ಸರಿದೂಗಿಸುವ ಸ್ಥಿತಿಯಲ್ಲಿಲ್ಲ. ಚೆಂಡು ಹೂವು ಕಿಲೋಗೆ ಸುಮಾರು 10ರಿಂದ 30 ರೂಪಾಯಿ, ಬಿಡಿ ಗುಲಾಬಿ 30ರಿಂದ 45 ರೂಪಾ ಯಿವರೆಗೆ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಸೇವಂತಿ, ಕನಕಾಂಬರ ಮತ್ತಿತರ ಹೂವುಗಳಿಗೆ ತುಸು ಉತ್ತಮ ದರವಿದ್ದರೂ ಗುಣಮಟ್ಟ, ಆವಕ ಹಾಗೂ ದಿನದ ಮಾರುಕಟ್ಟೆ ಪರಿಸ್ಥಿತಿಯ ಮೇಲೆ ದರದಲ್ಲಿ ಭಾರಿ ಏರಿಳಿತ ಕಂಡುಬರುತ್ತಿದೆ.

2cbpm12flower

ಅತಿಯಾದ ಆವಕವೇ ದರ ಕುಸಿತಕ್ಕೆ ಕಾರಣ

ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ತಾಲೂಕುಗಳು ಹಾಗೂ ಜಿಲ್ಲೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರುತ್ತಿದೆ. ಒಂದೇ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಹೂವು ಮಾರುಕಟ್ಟೆಗೆ ಹರಿದುಬರುತ್ತಿರುವುದರಿಂದ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ ದರ ಕುಸಿದಿದೆ.

ಇದರ ಜೊತೆಗೆ ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಯೂ ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಹೂವನ್ನು ದೀರ್ಘಕಾಲ ಸಂಗ್ರಹಿಸಿಡಲು ಸಾಧ್ಯವಾಗದ ಕಾರಣ, ಇಂದು ಕೊಯ್ಲು ಮಾಡಿದ ಹೂವನ್ನು ಇಂದೇ ಮಾರಾಟ ಮಾಡಬೇಕಾದ ಅನಿವಾರ್ಯತೆ ರೈತರ ಮೇಲಿದೆ. ಹೀಗಾಗಿ ಮಾರುಕಟ್ಟೆ ದರವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟರೆ ರೈತರಿಗೆ ಬೇರೆ ದಾರಿ ಇಲ್ಲ.

ತೋಟದಿಂದ ಮಾರುಕಟ್ಟೆಗೆ... ಮತ್ತೆ ಕಸದ ಬುಟ್ಟಿಗೆ!

ಬೆಳಗಿನ ಜಾವವೇ ತೋಟಕ್ಕೆ ತೆರಳಿ ಗಂಟೆಗಟ್ಟಲೆ ಹೂ ಬಿಡಿಸುವ ರೈತರು, ಹೂವನ್ನು ಚೀಲಗಳಲ್ಲಿ ತುಂಬಿಕೊಂಡು ಮಾರುಕಟ್ಟೆಗೆ ತರುತ್ತಾರೆ. ಆದರೆ ನಿರೀಕ್ಷಿತ ದರ ಸಿಗದಿದ್ದಾಗ ಅವರ ಮುಂದಿರುವ ಪ್ರಶ್ನೆ ಒಂದೇ—ಇಷ್ಟು ದೂರ ತಂದ ಹೂವನ್ನು ಏನು ಮಾಡುವುದು? ಕೆಲವೊಮ್ಮೆ ದೊರೆಯುವ ಹಣ ಹೂ ಕೊಯ್ಲು ಮಾಡಿದ ಕೂಲಿಗೂ ಸಾಲುವುದಿಲ್ಲ. ಮಾರುಕಟ್ಟೆಗೆ ತಂದ ವಾಹನದ ಬಾಡಿಗೆ ಮತ್ತೊಂದು ಹೊರೆ. ಪರಿಣಾಮವಾಗಿ ಮಾರಾಟವಾಗದೆ ಉಳಿದ ಹೂವು ಮಾರುಕಟ್ಟೆ ಆವರಣ ದಲ್ಲೇ ಕಸದ ರಾಶಿ ಸೇರುತ್ತಿದೆ. ಕೆಲ ರೈತರು ತೋಟದಲ್ಲೇ ಹೂ ಬಿಡಿಸುವುದನ್ನು ನಿಲ್ಲಿಸುತ್ತಿದ್ದಾರೆ.

ಶೀತಲೀಕರಣ ವ್ಯವಸ್ಥೆ, ಬೆಂಬಲ ಬೆಲೆಗೆ ಆಗ್ರಹ

ಹೂವಿನ ಬೆಲೆ ಕುಸಿದ ಸಂದರ್ಭದಲ್ಲಿ ರೈತರಿಗೆ ತಕ್ಷಣದ ಪರ್ಯಾಯ ವ್ಯವಸ್ಥೆ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೂವುಗಳನ್ನು ಕೆಲಕಾಲ ಸಂರಕ್ಷಿಸಿಡಲು ಶೀತಲೀಕರಣ ಕೇಂದ್ರಗಳು, ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಹಾಗೂ ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರದಿಂದ ತುರ್ತು ನೆರವು ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆ ಹಾಗೂ ಶೀತಲೀಕರಣ ವ್ಯವಸ್ಥೆ ನಿರ್ಮಿಸುವ ಯೋಜನೆಗಳ ಕುರಿತು ಹಲವು ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ, ಪ್ರಸ್ತುತ ಸಂಕಷ್ಟಕ್ಕೆ ತಕ್ಷಣ ಪರಿಹಾರ ದೊರೆಯಬೇಕಾಗಿದೆ. ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಮಾರುಕಟ್ಟೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ರೈತರೊಂದಿಗೆ ಸಭೆ ನಡೆಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತೋಟದಲ್ಲಿ ಅರಳುವ ಪ್ರತಿಯೊಂದು ಹೂವಿನ ಹಿಂದೆ ರೈತನ ಹಲವು ದಿನಗಳ ಶ್ರಮ, ಸಾಲದ ಹಣ, ಕುಟುಂಬದ ನಿರೀಕ್ಷೆ ಮತ್ತು ಬದುಕಿನ ಕನಸಿದೆ. ಆ ಹೂವಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಕಸದ ಪಾಲಾಗುತ್ತಿರುವುದು ಕೇವಲ ಬೆಳೆಯ ನಷ್ಟವಲ್ಲ; ಸಾವಿರಾರು ರೈತ ಕುಟುಂಬಗಳ ಬದುಕಿನ ಮೇಲಿನ ಹೊಡೆತವಾಗಿದೆ.

ಸ್ಥಳೀಯ ಮಾರುಕಟ್ಟೆಯ ಬೆಲೆ ಕುಸಿದರೂ ಚಿಕ್ಕಬಳ್ಳಾಪುರದ ಹೂವುಗಳಿಗೆ ಬೆಂಗಳೂರು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಬೇಡಿಕೆ ಇದೆ. ಗುಣಮಟ್ಟದ ಕಟ್‌ಫ್ಲವರ್‌ಗಳು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಗಲ್ಫ್ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯನ್ನೂ ತಲುಪುತ್ತವೆ. ಇಷ್ಟೊಂದು ವಿಶಾಲ ಮಾರುಕಟ್ಟೆ ಹೊಂದಿದ್ದರೂ ಸ್ಥಳೀಯ ರೈತರಿಗೆ ಸ್ಥಿರ ಬೆಲೆ ಸಿಗದಿರುವುದು ವಿಪರ್ಯಾಸ.”