ಚಿಕ್ಕಬಳ್ಳಾಪುರ, ಅ. 17: ಧರ್ಮದಲ್ಲಿ ರಾಜಕಾರಣ ಬೆರೆಯಬಾರದು. ಆದರೆ ರಾಜಕಾರಣದಲ್ಲಿ ಧರ್ಮ ಮತ್ತು ಮೌಲ್ಯಗಳು ಉಳಿಯುವಂತಾಗಲು ಧಾರ್ಮಿಕ ಗುರುಗಳು ರಾಜಕಾರಣಿಗಳಿಗೆ ಆಶೀರ್ವಾದ ನೀಡಿ, ಮಾರ್ಗದರ್ಶನ ಮಾಡಬೇಕು ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ರಾಜಕೀಯದಲ್ಲಿ ಧರ್ಮ ಉಳಿಯಬೇಕು ಎಂಬುದು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಆಶಯವಾಗಿತ್ತು. ಅದೇ ಮಾರ್ಗದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮುನ್ನಡೆಯುತ್ತಿದ್ದಾರೆ ಎಂದರು.
'ರಾಜಾ ಪ್ರತ್ಯಕ್ಷ ದೇವತಾʼ ಎಂಬ ಮಾತಿನಂತೆ, ಜನಪ್ರತಿನಿಧಿಗಳು ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಅವರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಗುರುಗಳಾದ ನಾವೆಲ್ಲರೂ ರಾಜಕಾರಣಿಗಳಿಗೆ ಪ್ರೇರಣೆ ಮತ್ತು ಆಶೀರ್ವಾದ ನೀಡಬೇಕು ಎಂದು ಅಭಿಪ್ರಾಯಪಟ್ಟರು. ನವರಾತ್ರಿಯ ಏಳನೇ ದಿನದ ಕಾಳರಾತ್ರಿ ಆರಾಧನೆಯ ಮಹತ್ವವನ್ನು ವಿವರಿಸಿದ ಅವರು, ಮಹಿಳೆ ಹಲವು ಅವತಾರಗಳನ್ನು ತಾಳಬಲ್ಲಳು. ಗುರುವಿಗೂ ಗುರು, ಪರಮ ಗುರುವೆಂದರೆ ತಾಯಿ ಎಂದು ಹೇಳಿದರು.
ರೈತರ ಬದುಕು ಹಾಗೂ ಸಮಾಜದ ಜೀವನಮಟ್ಟವನ್ನು ಬದಲಿಸುವ ಉದ್ದೇಶದಿಂದ ಸೇವಾಕಾರ್ಯಗಳಲ್ಲಿ ತೊಡಗಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯೆ ಹಾಗೂ ಎಐಸಿಸಿ ವಿದೇಶಾಂಗ ವ್ಯವಹಾರಗಳ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವಿದೇಶಗಳಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅಗತ್ಯ ಸಹಕಾರ ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಅಕ್ಟೋಬರ್ 18ರಿಂದ 21ರವರೆಗೆ ಮಹಾರುದ್ರ ಯಾಗ
ಕತ್ತಲೆ ನಿವಾರಿಸುವ ಕಾಳರಾತ್ರಿ
ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ವಿವಿಧ ಸ್ವರೂಪಗಳನ್ನು ಆರಾಧಿಸುವ ಸಂಪ್ರದಾಯದ ಮಹತ್ವವನ್ನು ವಿವರಿಸಿದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಮನುಷ್ಯನ ಬದುಕಿನ ಅಂಧಕಾರವನ್ನು ನಿವಾರಿಸುವ ಶಕ್ತಿ ಕಾಳರಾತ್ರಿ ದೇವಿಗಿದೆ ಎಂದು ಹೇಳಿದರು.
ಕತ್ತಲಿನಲ್ಲಿ ಭಯಗೊಂಡ ಮಗು ತಾಯಿಯನ್ನು ನೆನೆದು ‘ಅಮ್ಮʼ ಎಂದು ಕರೆಯುವಂತೆ, ಮನುಷ್ಯರೂ ತಮ್ಮೊಳಗಿನ ಅಜ್ಞಾನ ಮತ್ತು ಅಂಧಕಾರವನ್ನು ನಿವಾರಿಸಿಕೊಳ್ಳಲು ಜಗನ್ಮಾತೆಯ ಮೊರೆ ಹೋಗಬೇಕು ಎಂದರು.
ತನ್ನ ಮಕ್ಕಳ ಕತ್ತಲೆಯನ್ನು ದೂರಮಾಡಲು ತಾಯಿ ಕಾಳರಾತ್ರಿ ನಿದ್ರೆಯನ್ನೂ ತ್ಯಜಿಸಿ, ಅವರ ಸಂಕಷ್ಟಗಳನ್ನು ನಿವಾರಿಸಲು ಶ್ರಮಿಸುವ ತಾಯಿಯ ತ್ಯಾಗ ಮತ್ತು ಕಾಳಜಿಯನ್ನು ದೇವಿಯ ಸ್ವರೂಪದಲ್ಲಿ ಕಾಣಬಹುದು ಎಂದು ವಿವರಿಸಿದರು.
ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ, “ನಾನು ಗುರುವಲ್ಲ; ಸದ್ಗುರುಗಳ ಸಪ್ಲಿಮೆಂಟರಿ ವಿದ್ಯಾರ್ಥಿ. ಹೊರಗಿದ್ದರೂ ಇಲ್ಲಿಗೆ ವಿದ್ಯಾರ್ಥಿಯಾಗಿಯೇ ಬರುತ್ತೇನೆ”ಎಂದು ಹೇಳಿದರು. ಮುದ್ದೇನಹಳ್ಳಿಯಲ್ಲಿ ಕರುಣೆ ಮತ್ತು ಪಾರದರ್ಶಕತೆ ನೆಲೆಸಿವೆ. ಮಾನವೀಯತೆ ಮತ್ತು ದೈವತ್ವದ ಸಂಗಮವಾಗಿದೆ. ಜೀವನದ ಉದ್ದೇಶವನ್ನು ಕಲಿಸುವ ಸಂಸ್ಥೆ ಸತ್ಯಸಾಯಿ ಸಂಸ್ಥೆ ಎಂದು ಬಣ್ಣಿಸಿದರು. ಇಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎರಡು ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ. ರಾಜಕಾರಣಿಗಳಿಗೆ ಉತ್ತಮ ಆಡಳಿತದ ಮಾರ್ಗದರ್ಶನ ನೀಡಿದರೆ, ಸನ್ಯಾಸಿಗಳಿಗೆ ಶಿಸ್ತು ಮತ್ತು ಸಂಯಮದ ಪಾಠ ಕಲಿಸಲಾಗುತ್ತಿದೆ ಎಂದು ತಿಳಿಸಿದರು.
ಪುಟ್ಟಪರ್ತಿಯಲ್ಲಿ ಹಿಂದಿನ ಅವತಾರದಲ್ಲಿ ಸ್ವಾಮಿ ಮ್ಯಾಜಿಕ್ ಮಾಡುತ್ತಿದ್ದರೆ, ಈ ಜನ್ಮದಲ್ಲಿ ಮುದ್ದೇನಹಳ್ಳಿಯಲ್ಲಿ ಲಾಜಿಕ್ ಮೂಲಕ ಕಾರ್ಯಸಾಧನೆ ಮಾಡುತ್ತಿದ್ದಾರೆ. ಅಪಾರ ದೂರದೃಷ್ಟಿಯೊಂದಿಗೆ ಜ್ಞಾನವನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಕಾರ್ಯವನ್ನು ಶ್ಲಾಘಿಸಿದರು.
ರಾಜಕಾರಣಿಗಳಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರೇರಣೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು. ಬಳಿಕ ಖ್ಯಾತ ನೃತ್ಯ ಕಲಾವಿದೆ ಸೋನಾಲ್ ಮಾನ್ ಸಿಂಗ್ ಅವರ ತಂಡದಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಿತು.