ಗುಡಿಬಂಡೆ: ತಾನು ಲೋಕಾಯುಕ್ತ ಅಧಿಕಾರಿ ಎಂದು ಪರಿಚಯಿಸಿಕೊಂಡು ನರ್ಸ್ ಒಬ್ಬರಿಗೆ ನಿಮ್ಮ ವಿರುದ್ಧದ ದೂರು ನನ್ನ ಬಳಿ ಬಂದಿದೆ ಎಂದು ಬೆದರಿಸಿ 50 ಸಾವಿರ ರೂಪಾಯಿ ಫೋನ್‌ಪೇ ಮೂಲಕ ಪಡೆದುಕೊಂಡಿದ್ದ ಆರೋಪಿಯನ್ನು ಗುಡಿಬಂಡೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಚೇತನ್ ಎಂದು ಗುರುತಿಸಲಾಗಿದ್ದು, ಮೂಲತಃ ಮೈಸೂರಿನವನಾಗಿದ್ದು ಬೆಂಗಳೂರಿ ನಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಾಯಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಈತನ ಮೇಲಿದ್ದು, ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿ ದ್ದಾನೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುನಿತಾ ಅವರು ತಮ್ಮ ಸ್ವಗ್ರಾಮ ಪೆರೇಸಂದ್ರದಲ್ಲಿನ ಮನೆಯಲ್ಲಿ ಸರ್ಕಾರಿ ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರೆನ್ನಲಾಗಿದೆ.
ಈ ವಿಚಾರ ತಿಳಿದುಕೊಂಡಿದ್ದ ಚೇತನ್, ಬೀಚಗಾನಹಳ್ಳಿ ಆರೋಗ್ಯ ಕೇಂದ್ರಕ್ಕೆ ತೆರಳಿ ತಾನು ಲೋಕಾಯುಕ್ತ ಅಧಿಕಾರಿ ಎಂದು ಸುನಿತಾ ಅವರಿಗೆ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ವಿರುದ್ಧದ ದೂರು ನನ್ನ ಬಳಿ ಬಂದಿದೆ ಎಂದು ಹೇಳಿ ಪ್ರಕರಣವನ್ನು ಮುಚ್ಚಲು ಹಾಗೂ ಖರ್ಚುವೆಚ್ಚಕ್ಕಾಗಿ 50 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಆತನ ಮಾತುಗಳನ್ನು ನಂಬಿದ ನರ್ಸ್, ಆರೋಪಿಯ ಸೂಚನೆಯಂತೆ 50 ಸಾವಿರ ರೂಪಾಯಿ ಯನ್ನು ಫೋನ್‌ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ. ಹಣ ಪಡೆದ ಬಳಿಕ ಆರೋಪಿ ಅಲ್ಲಿಂದ ತೆರಳಿದ್ದಾನೆ.
ನಂತರ ಅನುಮಾನಗೊಂಡ ನರ್ಸ್ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ, ತಮ್ಮ ವಿರುದ್ಧ ಯಾವುದೇ ದೂರು ಬಂದಿಲ್ಲ ಎಂಬುದು ತಿಳಿದುಬಂದಿದೆ. ತಾನು ಮೋಸ ಹೋಗಿರುವುದು ಅರಿವಾದ ಬಳಿಕ ಅವರು ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.