ಚಿಕ್ಕಬಳ್ಳಾಪುರ: ಈ ತಿಂಗಳ ಅಂತ್ಯದಲ್ಲಿ ಮುಂಗಾರು ಮಾನ್ಸೂನ್ ಪ್ರವೇಶವಾಗಲಿದ್ದು, ಈ ಮಳೆಯಿಂದಾಗುವ ಹಾನಿಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದಿನದ 24 ಗಂಟೆ, ವಾರದ 7 ದಿನಗಳೂ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ “ಮಳೆಹಾನಿ ಹಾಗೂ ಬೆಳೆ ಹಾನಿಯ ವಿವರ ಪಡೆದು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವಿಡಿಯೋ ಸಂವಾದ” ಸಭೆಯ ಮೂಲಕ ಸೂಚನೆಗಳನ್ನು ನೀಡಿ ಮಾತನಾಡಿದರು.
ಬೆಳೆಹಾನಿ ಸಮೀಕ್ಷೆ ನಡೆಸಿ!!
ಮೇ 21ರ ರಾತ್ರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ಜಿಲ್ಲೆಯ ವಿವಿಧೆಡೆ ತೋಟ ಗಾರಿಕಾ ಬೆಳೆಗಳು ನಾಶವಾಗಿವೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. 20 ಹೆಕ್ಟೇರ್ ಬಾಳೆ, 1.60 ಹೆಕ್ಟೇರ್ ಅಡಿಕೆ, 1.20 ಹೆಕ್ಟೇರ್ ಟಮೋಟೋ ಹಾಗೂ 2 ಹೆಕ್ಟೇರ್ ತರಕಾರಿ ಬೆಳೆಗಳು ಜಿಲ್ಲೆಯಲ್ಲಿ ನಾಶವಾಗಿದ್ದು, ಆ ಎಲ್ಲಾ ರೈತರ ತಾಕುಗಳಿಗೆ ತಾಲ್ಲೂಕು ತಹಸೀಲ್ದಾರರು ಖುದ್ದು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಬೇಕು ಜೊತೆಗೆ ತೋಟಗಾರಿಕೆ ಇಲಾಖೆಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಹಣ ನೀಡಲು ತುರ್ತು ಕ್ರಮ ವಹಿಸಬೇಕು ಎಂದರು.
ಇದನ್ನೂ ಓದಿ: Chikkaballapur News: ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ
ಸಿಡಿಲು ಅಪಘಾತ ಅರಿವು ಅಗತ್ಯ??
ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಮಳೆ ಹಾನಿಯಾದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಮಾಡಿ ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಲೋಚಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಳೆ ಹಾನಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸೇರಿಸಿ ತಾಲ್ಲೂಕು ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ನಿರ್ದೇಶನವನ್ನು ಆಯಾ ತಹಸೀಲ್ದಾರ್‌ಗಳು ನೀಡಬೇಕು. ಈಗಾಗಲೆ ಸಿಡಿಲು ಬಡಿದು ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುಂಗಾರು ಅವಧಿಯಲ್ಲಿ ಸಿಡಿಲು ಬಡಿಯುವ ಸಾಧ್ಯತೆ ಜಾಸ್ತಿ ಇರಲಿದೆ, ಸಿಡಿಲು ಅಘಾತಗಳನ್ನು ತಪ್ಪಿಸಲು ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಶಿಥಿಲಾವಸ್ಥೆ ಕಟ್ಟಡಗಳ ಬಗ್ಗೆ ಎಚ್ಚರವಿರಲಿ!!
ಜಿಲ್ಲೆಯಲ್ಲಿನ ಅಂಗನವಾಡಿಗಳು, ಶಾಲಾ ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿದ್ಯುತ್ ಪರಿವರ್ತಕ (ಟಿಸಿ)ಗಳು, ವಿದ್ಯುತ್ ಕಂಬಗಳು ಸೇರಿದಂತೆ ಯಾವುದೇ ಸಾರ್ವಜನಿಕ ಆಸ್ತಿಗಳು ಹಾನಿಯಾಗಿದ್ದಲ್ಲಿ ವರದಿ ಮಾಡಬೇಕು. ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಂಡು ಅವಘಡಗಳನ್ನು ತಪ್ಪಿಸಬೇಕು. ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳು ಹಾಳಾದಲ್ಲಿ ತುರ್ತಾಗಿ ರಿಪೇರಿ ಮಾಡಿಸಬೇಕು. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸನ್ನದ್ದರಾಗ ಬೇಕು ಎಂದು ಸೂಚನೆಗಳನ್ನು ನೀಡಿದರು.
ಎಫ್‌ಐಡಿ ಆಧಾರಿತ ರಸಗೊಬ್ಬರ ವಿತರಣೆ!!
ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಸೇರಿದಂತೆ ಈ ವರ್ಷ ಜಿಲ್ಲೆಯಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳ ಬಗ್ಗೆ ರೂಪುರೇಷೆಗಳನ್ನು ಸಿದ್ದಪಡಿಸಿ ಮುಂಗಾರು ಪುರ್ವದಲ್ಲೆ ರೈತರಿಗೆ ಮಾಹಿತಿ ನೀಡಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು. ಒಟ್ಟಾರೆ ಎಫ್‌ಐಡಿ ಆಧಾರಿತವಾಗಿ ರಸಗೊಬ್ಬರ ವಿತರಣೆ ಆಗಬೇಕು. ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲು ಸಮರ್ಪಕವಾಗಿ ಹಾಗೂ ಕಾಲೋಚಿತವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ರಸ್ತೆ ಇಕ್ಕೆಲಗಳನ್ನು ಸ್ವಚ್ಛ ಮಾಡಿ ತ್ಯಾಜ್ಯ ನಿರ್ಮೂಲನೆ ಆಗಲಿ!!
ನಗರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಹಾಗೂ ಇತರ ರಸ್ತೆಗಳ ಇಕ್ಕೆಲಗಳಲ್ಲಿ ಶೇಖರಣೆ ಆಗಿರುವ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ತ್ಯಾಜ್ಯವನ್ನು ಒಂದು ವಾರದ ಒಳಗಾಗಿ ತೆರವು ಮಾಡಬೇಕು. ಖಾಲಿ ನಿವೇಶನಗಳಲ್ಲಿ ಗಿಡಗಳನ್ನು ಹಾಗೂ ಘನ ತ್ಯಾಜ್ಯವನ್ನು ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕವೇ ತೆರವು ಮಾಡಬೇಕು,ಸದರಿ ವೆಚ್ಚವನ್ನು ನಿವೇಶನ ಮಾಲಿಕರಿಂದ ವಸೂಲಿ ಮಾಡಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ರವರು ಮಾತನಾಡಿ, ಮಳೆಯ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಜಿಲ್ಲೆಯಲ್ಲಿನ ರಾಜ ಕಾಲುವೆಗಳು, ಚರಂಡಿಗಳನ್ನು ತುರ್ತಾಗಿ ಸ್ವಚ್ಛ ಮಾಡಬೇಕು. ಗಿಡ, ಮರ, ಹುಲ್ಲು ಹಾಗೂ ಯಾವುದೇ ರೀತಿಯ ತ್ಯಾಜ್ಯವಿದ್ದಲ್ಲಿ ತೆರವು ಮಾಡಬೇಕು. ಒಂದು ಗ್ರಾಮ ಅಥವಾ ವಾರ್ಡ್ ನ್ನು ಸ್ವಚ್ಚಗೊಳಿಸಲು ಒಂದು ಗ್ಯಾಂಗ್ ವರ್ಕ್ (ಗುಂಪು ಕಾರ್ಯ) ರೀತಿ ಕೆಲಸ ಮಾಡಲು ಒಂದು ತಂಡ ವನ್ನು ಸ್ಥಳೀಯವಾಗಿ ರಚಿಸಿ ಆ ಗ್ರಾಮ/ವಾರ್ಡ್ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೆವಾರಿ ಮಾಡಿ ಸ್ವಚ್ಛತೆ ಕಾರ್ಯಕೈಗೊಳ್ಳಲು ಕ್ರಮ ವಹಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.