ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿಯ ಮುತ್ತುಕದಹಳ್ಳಿ ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವು ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಸದರಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರು ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಲಿಖಿತ ಮೂಲಕ ದೂರನ್ನು ನೀಡಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು.
ಮುತ್ತುಕದಹಳ್ಳಿಯಿಂದ ತಳಗವಾರ ಗ್ರಾಮದ ಗಡಿಯವರೆಗೆ ಹೋಗುವ ಸರ್ಕಾರಿ ನಕಾಶೆ ರಸ್ತೆಯು ವಿವಿಧ ಸರ್ವೆ ನಂಬರ್‌ಗಳ ಮೂಲಕ ಹಾದುಹೋಗುತ್ತದೆ.ಈ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಅಳತೆ ಕಾರ್ಯ ಮಾಡಿ ರಸ್ತೆಯನ್ನು ಗುರುತಿಸಿ ಕೊಟ್ಟಿದ್ದರು.
ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದರೂ, ದೇವರಾಜ್.ಎಂ ಮತ್ತು ಇತರರು ಸೇರಿ ತಮಗೆ ತೊಂದರೆ ನೀಡುವ ಉದ್ದೇಶದಿಂದ ಮತ್ತೆ ಲೋಕಾಯುಕ್ತಕ್ಕೆ ದೂರು ನೀಡಿ ಪುನಃ ಅಳತೆ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಸರ್ವೆ ನಂಬರ್ 75ರಲ್ಲಿ ರೈತರು ರೇಷ್ಮೆ ಬೆಳೆಯನ್ನು ಬೆಳೆದಿದ್ದಾರೆ. ರಸ್ತೆ ಅಳತೆಯ ಹೆಸರಿ ನಲ್ಲಿ ಈ ರೇಷ್ಮೆ ಬೆಳೆಯನ್ನು ನಾಶ ಮಾಡಲು ಎದುರಾಳಿಗಳು ಸಂಚು ರೂಪಿಸಿದ್ದಾರೆ. ನಾವು ಯಾವುದೇ ರಸ್ತೆ ಒತ್ತುವರಿ ಮಾಡಿಕೊಂಡಿಲ್ಲ.ಕೇವಲ ವೈಯಕ್ತಿಕ ದ್ವೇಷಕ್ಕಾಗಿ ಪದೇ ಪದೇ ಅಳತೆ ಮಾಡಿಸಿ ನಮ್ಮ ಬೆಳೆಯನ್ನು ನಾಶ ಮಾಡಲು ಪ್ರಯತ್ನಿಸಲಾಗುತ್ತಿದೆ" ಎಂದು ನಾರಾಯಣಸ್ವಾಮಿ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ, ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಅಳತೆ ಕಾರ್ಯವನ್ನು ನಿಲ್ಲಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಅವರು ಚಿಕ್ಕಬಳ್ಳಾಪುರ ಜಿಲ್ಲಾ ಅಧಿಕಾರಿಗಳಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಗೋಳು ತೋಡಿಕೊಂಡಿದ್ದಾರೆ.