ಗೌರಿಬಿದನೂರು: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತರೆ, ಒಂದೇ ತಿಂಗಳಲ್ಲಿ ವಾಟದಹೊಸಹಳ್ಳಿ ಕೆರೆಯ ನೀರು ಖಾಲಿಯಾಗಲಿದೆ ಎಂದು ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ(N H Shivashankar Reddy) ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 2 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ವಾಟದ ಹೊಸಹಳ್ಳಿ ಕೆರೆಯ ನೀರನ್ನು ಗೌರಿಬಿದನೂರು ನಗರಕ್ಕೆ ಕೊಂಡೊಯ್ಯಲು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ(MLA K H Puttaswamy Gowda) ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಯೋಜನೆ ವಿರೋಧಿಸಿ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಹಾಗೂ ಅಚ್ಚುಕಟ್ಟು ದಾರರು ಪ್ರತಿಭಟನೆ ನಡೆಸಿದ್ದಾರೆ. ಕೆರೆಗೆ ಪೈಪ್ಲೈನ್ ಅಳವಡಿಸಲು ಮುಂದಾದರೆ ಜೆಸಿಬಿಗೆ ಅಡ್ಡಲಾಗಿ ನಿಲ್ಲುವುದಾಗಿ ಶಾಸಕರಿಗೆ ಸವಾಲು ಹಾಕಿದ್ದೆ. ದೊಡ್ಡ ಪೈಪ್ಗಳ ಮೂಲಕ ನಗರಕ್ಕೆ ನೀರು ಹರಿಸಿದರೆ ಒಂದೇ ತಿಂಗಳಲ್ಲಿ ಕೆರೆಯ ನೀರು ಖಾಲಿಯಾಗುವ ಆತಂಕವಿದೆ ಎಂದರು.
ಇದನ್ನೂ ಓದಿ: Gauribidanur News: ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಲು ಕುವೆಂಪು ಅವರ ಮಂತ್ರ ಮಾಂಗಲ್ಯ ಮಾದರಿ: ಡಾ. ರಮೇಶ್ ಚಂದ್ರ ದತ್ತ
ನಗರಕ್ಕೆ ನೀರು ಪೂರೈಸುವ ಉದ್ದೇಶದಿಂದ ಕಿಂಡಿ ಅಣೆಕಟ್ಟನ್ನು ಅಭಿವೃದ್ಧಿಪಡಿಸಿದರೆ ಸುತ್ತಮುತ್ತ ಲಿನ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತದೆ ಎಂಬುದನ್ನು ಸಂಬಂಧಪಟ್ಟವರಿಗೆ ಹಲವು ಬಾರಿ ತಿಳಿಸಿದ್ದೇನೆ. ಕೆರೆಯ ನೀರನ್ನು ಉಳಿಸಿಕೊಳ್ಳಲು ಜನರು ಮುಂದಾಗಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ಬಲವರ್ಧ ನೆಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಆಮಿಷದ ರಾಜಕಾರಣದಿಂದ ತಾಲ್ಲೂಕಿಗೆ ಹಾನಿ: ಮಂಜುನಾಥ್
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಮಾತನಾಡಿ, ತಾಲ್ಲೂಕಿನ ಕೆಲವು ಯುವಕರು ಆಮಿಷಗಳಿಗೆ ಒಳಗಾಗಿ ಕೆ.ಎಚ್.ಪಿ. ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಲ್ಲಿನ ವಾಸ್ತವ ಅರಿತ ಬಳಿಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಿದ್ದಾರೆ ಎಂದು ಹೇಳಿದರು.
ಕೆ.ಎಚ್.ಪಿ. ಬಣದವರು ಜೋಳದ ವ್ಯಾಪಾರದಂತೆ ಮತ ಖರೀದಿಸುವ ಪ್ರಯತ್ನಗಳಿಗೆ ಜನರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಾಲ್ಲೂಕಿನಲ್ಲಿ ನಡೆಯುತ್ತಿರುವ ಖರೀದಿ ರಾಜಕಾರಣದಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಎಲ್ಲ ಪಕ್ಷಗಳ ಮುಖಂಡರು ಒಗ್ಗಟ್ಟಾಗಿ ಹೋರಾಡಿ ತಾಲ್ಲೂಕನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕರೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದಲ್ಲಿದ್ದರೂ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ನೋವು ತಂದಿವೆ. ಮುಂಬ ರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ವಾಟದಹೊಸಹಳ್ಳಿ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೆರೆ ನೀರನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಬಲ ತುಂಬಬೇಕು ಎಂದು ಹೇಳಿದರು.
ಸಭೆಯಲ್ಲಿ ವೆಂಕಟ್, ನಾರಾಯಣಸ್ವಾಮಿ, ತಾರಾನಾಥ್, ಹರ್ಷವರ್ಧನ್ ರೆಡ್ಡಿ, ವಿಜಯ್ ಕುಮಾರ್, ಕಲ್ಪನಾ ರಮೇಶ್, ರಫೀಕ್, ಗೊಟ್ಲಗುಂಟೆ ವೆಂಕಟರಮಣಪ್ಪ, ಅಶ್ವತಪ್ಪ, ಕೆಂಕರೆ, ಗಂಗಾಧರಪ್ಪ, ಲಕ್ಷ್ಮೀನಾರಾಯಣ, ಅಶ್ವಥ್ ರೆಡ್ಡಿ, ರವಿ, ರಮೇಶ್, ರಾಜಗೋಪಾಲ್, ಅರ್ಮನ್, ನಬಿ, ದೀಪಾಂಶು, ಗಿರೀಶ್ ರೆಡ್ಡಿ, ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.