ಚಿಕ್ಕಬಳ್ಳಾಪುರ: ಮುಂಬರುವ 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆ ಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಂಘಟನೆಯನ್ನು ಪುನಶ್ಚೇತನಗೊಳಿಸುವ ಮಹತ್ವಾಕಾಂಕ್ಷೆಯ 'ಸಂಘಟನೆ ಸೃಜನ್ ಅಭಿಯಾನ'ಕ್ಕೆ ರಾಜ್ಯದಲ್ಲಿ ಚಾಲನೆ ದೊರೆತಿದ್ದು, ಅದರ ಭಾಗವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ ವಾಗಿದೆ. ಆಗಸ್ಟ್ 24ರೊಳಗೆ ರಾಜ್ಯದ ಎಲ್ಲ ಸಂಘಟನಾ ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಗುರಿ ಹೊಂದಲಾಗಿದೆ ಎಂದು ಎಐಸಿಸಿ(AICC) ಜಿಲ್ಲಾ ಉಸ್ತುವಾರಿ ಪಾಲಕ್ ವರ್ಮ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜು.25ರಿಂದಲೇ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 16ರೊಳಗೆ ವರದಿ ಸಲ್ಲಿಸಲಾಗುವುದು ಎಂದರು. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಪ್ರಜಾತಾಂತ್ರಿಕವಾಗಿರಲೆಂಬ ಉದ್ದೇಶದಿಂದ ಎಐಸಿಸಿ ವಿಶೇಷ ವೀಕ್ಷಕರನ್ನು ನೇಮಕ ಮಾಡಿದ್ದು, ಅವರು ಸ್ಥಳೀಯ ನಾಯಕರು, ಜನಪ್ರತಿನಿಧಿಗಳು, ಬ್ಲಾಕ್ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಿ ಸಮಗ್ರ ವರದಿ ಸಿದ್ಧಪಡಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಯುವ ನಾಯಕತ್ವಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು ಪಕ್ಷದ ಉದ್ದೇಶವಾಗಿದೆ. ನೇಮಕಗೊಳ್ಳುವ ಅಧ್ಯಕ್ಷರಲ್ಲಿ ಕನಿಷ್ಠ ಶೇ.50ರಷ್ಟು ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಜೊತೆಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿದ 4237 ರಕ್ತದಾನಿಗಳಿಗೆ ಕೋಟಿ ನಮನ: ಕೆ.ವಿ. ನವೀನ್ ಕಿರಣ್
ಪ್ರತಿ ಜಿಲ್ಲೆಯಿಂದ ಅರ್ಹ ಆರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ರಾಜ್ಯ ಉಸ್ತುವಾರಿಗಳೊಂದಿಗೆ ಚರ್ಚಿಸಿ, ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಮಾತನಾಡಿ, ಕಾಂಗ್ರೆಸ್ ಸಂಘಟನೆಯನ್ನು ಜನಸಾಮಾನ್ಯರತ್ತ ಮತ್ತಷ್ಟು ಸಮೀಪಿಸುವ ಉದ್ದೇಶದಿಂದ ದೇಶಾದ್ಯಂತ ಸಂಘಟನೆ ಸೃಜನ್ ಅಭಿಯಾನ ರೂಪಿಸಲಾಗಿದೆ ಎಂದರು. ಜಿಲ್ಲಾಧ್ಯಕ್ಷರ ಆಯ್ಕೆ ಕೇವಲ ಹುದ್ದೆ ಭರ್ತಿಯಲ್ಲ; ಭವಿಷ್ಯದ ರಾಜಕೀಯ ನಾಯಕತ್ವ ರೂಪಿಸುವ ಪ್ರಕ್ರಿಯೆಯಾಗಿದೆ. ಆದ್ದರಿಂದ ಸಂಘಟನಾ ಸಾಮರ್ಥ್ಯ, ಜನಬೆಂಬಲ, ಕಾರ್ಯಕರ್ತರ ವಿಶ್ವಾಸ ಹಾಗೂ ಸೇವಾ ಮನೋಭಾವಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿಚಾರ ಪ್ರಸ್ತಾಪಿಸಿದ ಸುದರ್ಶನ್ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅದನ್ನು ತಕ್ಷಣ ಅಂಗೀಕರಿಸಿ, ವಿದ್ಯಾರ್ಥಿಗಳೊಂದಿಗೆ ನಡೆದ ಅನ್ಯಾಯಕ್ಕಾಗಿ ಕೇಂದ್ರ ಸರ್ಕಾರ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡು ಅರ್ಹ ಮತದಾರರ ಹೆಸರು ಕೈಬಿಡದಂತೆ ಜಾಗೃತಿ ಮೂಡಿಸ ಬೇಕೆಂದೂ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ರಕ್ಷಾ ರಾಮಯ್ಯ, ಕವಿತಾ ರೆಡ್ಡಿ, ಕಾರ್ತಿಕ್, ಮಾಜಿ ಸಚಿವ ಶಿವಶಂಕರ ರೆಡ್ಡಿ, ರಾಜೀವ್ ಗೌಡ, ಅಂಜಿನಪ್ಪ, ಯಲುವಹಳ್ಳಿ ರಮೇಶ್, ಜಯಂತಿ, ನಾರಾಯಣಸ್ವಾಮಿ, ನಾಗಭೂಷಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.