ಚಿಕ್ಕಬಳ್ಳಾಪುರ: ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಅಗತ್ಯವಿರುವ ರೋಗಿಗಳಿಗೆ ರಕ್ತ ದೊರೆಯಬೇಕಾದರೆ ಸ್ವಯಂಪ್ರೇರಿತ ರಕ್ತದಾನವೇ ಪ್ರಮುಖ ಆಧಾರವಾಗಿದ್ದು, ಈ ನಿಟ್ಟಿನಲ್ಲಿ ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಶ್ರೀ ಚೆನ್ನಕೇಶವಸ್ವಾಮಿ ವಿನಾಯಕ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 26 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಇದೇ ವೇಳೆ ಗೌರಿಬಿದನೂರು ತಾಲ್ಲೂಕಿನ ಸೂರ್ಯ ಕಲ್ಯಾಣ ಮಂಟಪದಲ್ಲಿ ಮೋಹನ್ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 67 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಒಟ್ಟು 93 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಗ್ರಾಮೀಣ ಭಾಗದ ಯುವಕರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಕ್ತದಾನದಂತಹ ಮಾನವೀಯ ಸೇವೆಗಳಲ್ಲಿ ಭಾಗವಹಿಸುತ್ತಿರುವುದು ಪ್ರಶಂಸನೀಯವಾಗಿದೆ. ಇಂತಹ ಸೇವಾ ಚಟುವಟಿಕೆಗಳು ಇತರರಿಗೂ ಮಾದರಿಯಾಗಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಸೆ.17ರಿಂದ ಅಕ್ಟೋಬರ್ 2ರವರೆಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ಮೆಗಾ ಸ್ವಯಂಪ್ರೇರಿತ ರಕ್ತದಾನ ಅಭಿಯಾನ ನಡೆಯುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ರಕ್ತಚಾಲನಾ ಪರಿಷತ್ತಿನ ಮಾರ್ಗಸೂಚಿಯಂತೆ ರಕ್ತದಾನಿಗಳನ್ನು ಪ್ರೋತ್ಸಾಹಿಸ ಲಾಗುತ್ತಿದೆ. ವರ್ಷವಿಡೀ ರಕ್ತದ ಲಭ್ಯತೆ ಕಾಯ್ದುಕೊಳ್ಳಲು ಸ್ವಯಂಪ್ರೇರಿತ ರಕ್ತದಾನ ಮಹತ್ವದ್ದಾಗಿದೆ.
14,07,810 ಜನಸಂಖ್ಯೆ ಹೊಂದಿರುವ ಜಿಲ್ಲೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ವಾರ್ಷಿಕವಾಗಿ ಸುಮಾರು 14,078 ಯೂನಿಟ್ ರಕ್ತದ ಅಗತ್ಯವಿದೆ. ರಕ್ತವನ್ನು ಯಾವುದೇ ಕಾರ್ಖಾನೆ ಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ; ಮಾನವ ದೇಹದಿಂದ ಮಾತ್ರ ಪಡೆಯಲು ಸಾಧ್ಯವಾಗುವು ದರಿಂದ ಆರೋಗ್ಯವಂತರು ರಕ್ತದಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿ ಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಶ್ರೀ ಸತ್ಯಸಾಯಿ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ರಕ್ತನಿಧಿ ಕೇಂದ್ರ ಹಾಗೂ ಚಿಕ್ಕಬಳ್ಳಾಪುರ ರಕ್ತನಿಧಿ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಅರ್ಹ ರಕ್ತದಾನಿಗಳು ನೇರವಾಗಿ ಕೇಂದ್ರಗಳಿಗೆ ಭೇಟಿ ನೀಡಿ ನಮೂನೆ ಭರ್ತಿ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು.
18ರಿಂದ 65 ವರ್ಷದೊಳಗಿನ, ಆರೋಗ್ಯವಾಗಿರುವ ಅರ್ಹ ವ್ಯಕ್ತಿಗಳು ನಿಯಮಾನುಸಾರ ರಕ್ತದಾನ ಮಾಡಬಹುದಾಗಿದೆ. ಹೆರಿಗೆ, ಶಸ್ತ್ರಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ, ಸುಟ್ಟ ಗಾಯಗಳು, ಡೆಂಗ್ಯೂ ಹಾಗೂ ರಕ್ತಸಂಬಂಧಿ ಕಾಯಿಲೆಗಳ ಸಂದರ್ಭದಲ್ಲಿ ರಕ್ತ ಮತ್ತು ರಕ್ತದ ಘಟಕಗಳ ಅಗತ್ಯ ಹೆಚ್ಚಾಗಿ ರುವುದರಿಂದ ನಿರಂತರ ರಕ್ತದಾನಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.