ಚಿಕ್ಕಬಳ್ಳಾಪುರ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 2026ನೇ ಸಾಲಿನ ಮೂರನೇ ಬೃಹತ್ ಲೋಕ ಅದಾಲತ್ ಸೆಪ್ಟೆಂಬರ್ 19ರಂದು ನಡೆಯಲಿದ್ದು, ರಾಜಿಯಾಗಬಹುದಾದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಟಿ.ಪಿ.ರಾಮಲಿಂಗೇಗೌಡ ಹೇಳಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋ ಜಿಸಿದ್ದ ಲೋಕ ಅದಾಲತ್ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನ್ಯಾಯಾಲಯಗಳಲ್ಲಿ 51,483ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಸೆ.19ರ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಈಗಾಗಲೇ ಗುರುತಿಸ ಲಾಗಿದ್ದು, ಸೆ.18ರವರೆಗೆ ಇನ್ನಷ್ಟು ಪ್ರಕರಣಗಳು ಸೇರುವ ನಿರೀಕ್ಷೆಯಿದೆ ಎಂದರು.
ಜುಲೈ 11ರಂದು ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಹಾಗೂ ಇತರೆ ಪ್ರಕರಣಗಳು ಸೇರಿದಂತೆ ಒಟ್ಟು 1,39,648 ಪ್ರಕರಣಗಳನ್ನು ಕೈಗೆತ್ತಿಕೊಂಡು 1,37,013 ಪ್ರಕರಣಗಳನ್ನು ಇತ್ಯರ್ಥಪಡಿಸ ಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: PDO caught in Lokayukta trap: ಸರಕಾರಿ ಜಾಗ ಮ್ಯುಟೇಷನ್‌ಗೆ 18 ಸಾವಿರ ಲಂಚ: ಪಿಡಿಒ ಲೋಕಾಯುಕ್ತ ಬಲೆಗೆ
ಬ್ಯಾಂಕ್ ವಸೂಲಾತಿ, ಚೆಕ್ ಅಮಾನ್ಯ, ಮೋಟಾರು ಅಪಘಾತ ಪರಿಹಾರ, ವೈವಾಹಿಕ ಹಾಗೂ ಕುಟುಂಬ ವಿವಾದ, ವಿದ್ಯುತ್ ಮತ್ತು ನೀರಿನ ಶುಲ್ಕ, ಕಾರ್ಮಿಕ ವಿವಾದ, ಭೂಸ್ವಾಧೀನ, ಸೇವಾ ಪ್ರಕರಣಗಳು ಸೇರಿದಂತೆ ರಾಜಿಯಾಗಬಹುದಾದ ವಿವಿಧ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಲು ಅವಕಾಶವಿದೆ. ನ್ಯಾಯಾಲಯದಲ್ಲಿ ದಾಖಲಾಗದ ವ್ಯಾಜ್ಯಪೂರ್ವ ಪ್ರಕರಣ ಗಳನ್ನೂ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಮಧ್ಯಸ್ಥಿಕೆ ಮೂಲಕ ತ್ವರಿತ ಪರಿಹಾರ
ಲೋಕ ಅದಾಲತ್‌ನಲ್ಲಿ ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ಪ್ರಕರಣಗಳು ಇತ್ಯರ್ಥವಾಗುವು ದರಿಂದ ಸಮಯ ಮತ್ತು ಹಣ ಉಳಿತಾಯವಾಗುವುದರ ಜತೆಗೆ ಪಕ್ಷಗಳ ನಡುವಿನ ವೈಮನಸ್ಸು ಕಡಿಮೆಯಾಗಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗುತ್ತದೆ. ಬಾಕಿ ಇರುವ ರಾಜಿಯಾಗ ಬಹುದಾದ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವ ಉದ್ದೇಶದಿಂದ ಆಗಸ್ಟ್ 1ರಿಂದ ಸೆ.30ರವರೆಗೆ ‘ಮೆಡಿಯೇಷನ್ ಡ್ರೈವ್ 3.0’ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.
ಲೋಕ ಅದಾಲತ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ತಮ್ಮ ಸಮಸ್ಯೆಗಳಿಗೆ ಮೊದಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ಹಾಗೂ ಸಿಬ್ಬಂದಿಯನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಅಲ್ಲಿ ಪರಿಹಾರ ದೊರೆಯದಿದ್ದಲ್ಲಿ ಮಧ್ಯಸ್ಥಿಕೆ ಕೇಂದ್ರ ಅಥವಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಉಪಸ್ಥಿತರಿದ್ದರು.