ಗೌರಿಬಿದನೂರು: ತಾಲೂಕಿನ ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಹಂತ ಹಂತವಾಗಿ ಹಕ್ಕುಪತ್ರ ಹಾಗೂ ಇ-ಸ್ವತ್ತು ಖಾತೆಗಳನ್ನು ವಿತರಿಸಲಾಗುವುದು ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ(MLA K H PuttaswamyGowda) ಭರವಸೆ ನೀಡಿದರು.
ತೊಂಡೇಬಾವಿ ಹೋಬಳಿಯ ಇಂದಿರಾನಗರ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹಕ್ಕುಪತ್ರ ಮತ್ತು ಇ-ಸ್ವತ್ತು ಖಾತೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಕ್ಕುಪತ್ರದಿಂದ ಫಲಾನುಭವಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ದೊರೆಯಲಿದ್ದು, ಮನೆ ನಿರ್ಮಾಣ, ಬ್ಯಾಂಕ್ ಸಾಲ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದರು.
ತಾಲೂಕಿನ ಎಲ್ಲ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಂತ ಹಂತವಾಗಿ ದಾಖಲೆ ಗಳನ್ನು ವಿತರಿಸಲಾಗುವುದು. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗದಂತೆ ಅಧಿಕಾರಿಗಳು ಪಾರದರ್ಶಕ ಹಾಗೂ ಜನಸ್ನೇಹಿ ಸೇವೆ ನೀಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: MLA KH Puttaswamy Gowda: ರಾಜ್ಯಕ್ಕೆ ಬೆಂಗಳೂರು ಅಕ್ಷಯ ಪಾತ್ರೆ ಇದ್ದಂತೆ : ಶಾಸಕ ಪುಟ್ಟಸ್ವಾಮಿ ಗೌಡ
ಈ ವೇಳೆ ಎಸಿಸಿ ಸಿಮೆಂಟ್ ಕಾರ್ಖಾನೆಯ ಸಿಎಸ್‌ಆರ್ ಅನುದಾನದ ಬಳಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪುಟ್ಟಸ್ವಾಮಿಗೌಡ, ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸಿ ಕೈತೊಳೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಕಾರ್ಖಾನೆಯ ದೂಳಿನಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಈ ವಿಷಯ ವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುವುದಾಗಿ ತಿಳಿಸಿದರು.
ತಾಲೂಕಿನ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹100 ಕೋಟಿ ಅನುದಾನದಲ್ಲಿ ಕಾಮಗಾರಿಗಳು ನಡೆಯು ತ್ತಿದ್ದು, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಕೆ.ಎಂ. ಅರವಿಂದ್ ಮಾತನಾಡಿ, ಕಂದಾಯ ಇಲಾಖೆ ಜನಸ್ನೇಹಿ ಸೇವೆಗೆ ಬದ್ಧವಾ ಗಿದ್ದು, ಶೀಘ್ರದಲ್ಲೇ ಬೃಹತ್ ಮಟ್ಟದಲ್ಲಿ ಇ-ಸ್ವತ್ತು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಇಒ ಜಿ.ಕೆ. ಹೊನ್ನಯ್ಯ, ವೃತ್ತ ನಿರೀಕ್ಷಕ ವಿ. ಅಂಜನ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎನ್. ವೆಂಕಟರಾಮರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.