ಚಿಕ್ಕಬಳ್ಳಾಪುರ : ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ-ಅರಸನ ಕೆರೆಯ ಪ್ರಸ್ತುತ ಇರುವ ನೀರಿನ ಸಂಗ್ರಹಣೆಯ ಸಾಮರ್ಥ್ಯವನ್ನು ಹೆಚ್ಚಿಸಿ 100 ಮಿಲಿಯನ್ ಕ್ಯೂಬಿಕ್ ಅಡಿ(mcft) ನೀರು ಸಂಗ್ರಹ ವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್( Dr. M. C Sudhakar) ತಿಳಿಸಿದರು.
ಚಿಂತಾಮಣಿ ತಾಲೂಕು, ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಭಕ್ತರಹಳ್ಳಿ ಅರಸನಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಭಕ್ತರಹಳ್ಳಿ ಅರಸನಕೆರೆಗೆ 27 ಎಂಸಿಎಫ್ ಟಿ ನೀರು ಸಂಗ್ರಹ ಆಗಿ ಕೋಡಿ ಹೋಗಿದೆ. ಈ ಕೆರೆಯ ಹೂಳು ತೆಗೆದರೆ 37 ಎಂಸಿಎಫ್ ಟಿ ನೀರು ಸಂಗ್ರಹಿಸಬಹುದು ಇದಲ್ಲದೆ ಭಕ್ತರ ಅರಸನಹಳ್ಳಿ ಕೆರೆ ವ್ಯಾಪ್ತಿಯ ಕೆಳಭಾಗದಲ್ಲಿ ಮತ್ತೊಂದು ಕೆರೆಯನ್ನು ನಿರ್ಮಾಣ ಮಾಡಿ ಅಲ್ಲಿಯೂ ನೀರನ್ನು ಸಂಗ್ರಹಿಸುವ ಕೆಲಸ ಆಗಲಿದೆ. ಆಗ 100ಎಂಸಿಎಫ್‌ಟಿ ನೀರು ಸಂಗ್ರಹವಾಗಿ ಚಿಂತಾಮಣಿ ನಗರಕ್ಕೆ ಹಾಗೂ ಸುತ್ತಮುತ್ತಲ ಹಳ್ಳಿಗಳಿಗೆ ನೀರು ಪೂರೈಸುವ ಕೆಲಸ ಆಗಲಿದೆ. ಜೊತೆಗೆ ಹೆಚ್ ಎನ್ ವ್ಯಾಲಿ ಮತ್ತು ಕೆ ಸಿ ವ್ಯಾಲಿ ಯೋಜನೆಗಳಿಂದ ಚಿಂತಾಮಣಿ ತಾಲೂಕಿನ 191 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸುವ ಕಾರ್ಯವನ್ನು ಮಾಡಲಾಗುವುದು ಹೆಚ್ ಎನ್ ವ್ಯಾಲಿ ಮೂರನೇ ಹಂತದ ಕಾಮಗಾರಿಗಳಿಗೆ ಈ ತಿಂಗಳ 24ರಂದು ಮಾನ್ಯ ಮುಖ್ಯಮಂತ್ರಿಗಳು ಶಿಡ್ಲಘಟ್ಟದಲ್ಲಿ ಚಾಲನೆ ನೀಡಲಿದ್ದಾರೆ.
ಹೆಚ್ ಎನ್ ವ್ಯಾಲಿ ನೀರಿನ ಸಂಪರ್ಕಕ್ಕೆ ವೃಷಭಾವತಿ ವ್ಯಾಲಿ ಯೋಜನೆಯ ನೀರನ್ನು ಜೋಡಣೆ ಮಾಡಿ ಹರಿಸಲು ಯೋಜಿಸಲಾಗಿದೆ ಆಗ ಚಿಂತಾಮಣಿ ತಾಲೂಕು ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಸಾಮರ್ಥ್ಯ ವೃದ್ಧಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಆರ್. ಸುದರ್ಶನ್ ಯಾದವ್,ಕಾರ್ಯನಿರ್ವಹಣಾಧಿಕಾರಿ ಎಸ್. ಆನಂದ, ನಗರಸಭೆ ಪೌರಾಯುಕ್ತ ಜಿ.ಎನ್. ಚಲಪತಿ,ನಗರಸಭೆ ಉಪಾಧ್ಯಕ್ಷೆ ಕೆ. ರಾಣಿ, ನಗರಸಭೆ ಅಧ್ಯಕ್ಷ ಅರ್ ಜಗನ್ನಾಥ, ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲವತಮ್ಮ ಆಂಜಿನೇಯ ರೆಡ್ಡಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.