ಗುಡಿಬಂಡೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಶಾಂತಿ ಸಭೆ ನಡೆಸಿ, ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಆಚರಿಸುವಂತೆ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಮನವಿ ಮಾಡಿತು.
ಸಭೆಯಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ಮಾತನಾಡಿ, ಗುಡಿಬಂಡೆಯಲ್ಲಿ ಎಲ್ಲ ಸಮುದಾಯದವರು ಹಿಂದಿನಿಂದಲೂ ಪರಸ್ಪರ ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಇದೇ ಪರಂಪರೆಯನ್ನು ಮುಂದುವರಿಸಿ ಈದ್ ಮಿಲಾದ್ ಹಬ್ಬ ವನ್ನು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಆಚರಿಸಬೇಕು. ಗೊಂದಲ, ಘರ್ಷಣೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದರು.
ಇದನ್ನೂ ಓದಿ:Gudibande News: ಗುಡಿಬಂಡೆಯಲ್ಲಿ ಪಿಯು ಕಾಲೇಜುಗಳ ಕ್ರೀಡಾಸ್ಪರ್ಧೆಗೆ ಚಾಲನೆ
ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲ ಸಮುದಾಯದವರು ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲೂ ಇದೇ ಸೌಹಾರ್ದ ವಾತಾವರಣ ಮುಂದುವರಿಯಬೇಕು. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಪೊಲೀಸ್ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು, ಮಸೀದಿ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.