ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಂತ್ರಿ ಭಾಗ್ಯದ ದಡದಲ್ಲಿ ಪ್ರದೀಪ್ ಈಶ್ವರ್; ದೆಹಲಿಯ ನಿರ್ಧಾರಕ್ಕೆ ಜಿಲ್ಲೆಯ ರಾಜಕೀಯ ಚಿತ್ತ

ಅಹಿಂದ ವರ್ಗದ ಪ್ರತಿನಿಧಿತ್ವ, ಯುವ ನಾಯಕತ್ವಕ್ಕೆ ಆದ್ಯತೆ ಹಾಗೂ ಸಾಮಾ ಜಿಕ ಸಮತೋಲನದ ಲೆಕ್ಕಾಚಾರಗಳಲ್ಲಿ ಪ್ರದೀಪ್ ಈಶ್ವರ್ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗುತ್ತಿದೆ. ಆದರೆ, ಇದೇ ವೇಳೆ ಜಿಲ್ಲೆಯ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಅಸಮಾಧಾನ ಮತ್ತು ಆಂತರಿಕ ವಿರೋಧವೂ ಅವರ ಹಾದಿಯಲ್ಲಿ ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂಬ ರಾಜಕೀಯ ವಲಯದ ಚರ್ಚೆಗಳಿವೆ.

ಸ್ವಪಕ್ಷೀಯ ವಿರೋಧ, ಸಮುದಾಯ ಸಮೀಕರಣ, ಯುವ ನಾಯಕತ್ವದ ಲೆಕ್ಕಾಚಾರಗಳ ನಡುವೆ ಚಿಕ್ಕಬಳ್ಳಾಪುರ ಶಾಸಕನ ಭವಿಷ್ಯ ನಿರ್ಧಾರ

- ಮುನಿರಾಜು ಎಂ. ಅರಿಕೆರೆ

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಚರ್ಚೆ ತೀವ್ರಗೊಂಡಿರುವ ಹೊತ್ತಿನಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಹೆಸರು ಸಚಿವ ಸ್ಥಾನದ ಸಂಭಾವ್ಯ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರೂ ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಯುವ ನಾಯಕರಲ್ಲಿ ಒಬ್ಬರಾಗಿರುವ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸ್ಥಾನ ದೊರೆಯಬಹುದೇ ಎಂಬ ಪ್ರಶ್ನೆ ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ, ಅಹಿಂದ ವರ್ಗದ ಪ್ರತಿನಿಧಿತ್ವ, ಯುವ ನಾಯಕತ್ವಕ್ಕೆ ಆದ್ಯತೆ ಹಾಗೂ ಸಾಮಾ ಜಿಕ ಸಮತೋಲನದ ಲೆಕ್ಕಾಚಾರಗಳಲ್ಲಿ ಪ್ರದೀಪ್ ಈಶ್ವರ್ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗು ತ್ತಿದೆ. ಆದರೆ, ಇದೇ ವೇಳೆ ಜಿಲ್ಲೆಯ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಅಸಮಾಧಾನ ಮತ್ತು ಆಂತರಿಕ ವಿರೋಧವೂ ಅವರ ಹಾದಿಯಲ್ಲಿ ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂಬ ರಾಜಕೀಯ ವಲಯದ ಚರ್ಚೆಗಳಿವೆ.

ಇದನ್ನೂ ಓದಿ: Chikkaballapur News: ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ

ಜೂನ್ 27ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಅಹಿತಕರ ಘಟನೆಗಳ ನಂತರ ಕೆಲವು ಪ್ರಭಾವಿ ಸಮುದಾಯಗಳ ಅಸಮಾಧಾನ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಬೆಳವಣಿಗೆಗಳು ಸಚಿವ ಸ್ಥಾನಕ್ಕೆ ನಡೆಯುತ್ತಿರುವ ಪ್ರಯತ್ನದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಯೂ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರನ್ನು ಸೋಲಿಸಿ ರಾಜ್ಯ ರಾಜಕೀಯದ ಗಮನ ಸೆಳೆದ ಪ್ರದೀಪ್ ಈಶ್ವರ್, ಬಳಿಕ "ನಮಸ್ತೆ ಚಿಕ್ಕಬಳ್ಳಾಪುರ", "ನಮ್ಮೂರಿಗೆ ನಮ್ಮ ಶಾಸಕ", ಉಚಿತ ಆಂಬುಲೆನ್ಸ್ ಸೇವೆ, ವಿದ್ಯಾರ್ಥಿ ವೇತನ ಯೋಜನೆಗಳು, ಸಿಇಟಿ–ನೀಟ್ ಉಚಿತ ತರಬೇತಿ ಹಾಗೂ ಗ್ರಾಮಮಟ್ಟದ ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಕಾರ್ಯಶೈಲಿಯನ್ನು ರೂಪಿಸಿಕೊಂಡರು. ಅಧಿಕಾರಿಗಳನ್ನು ಗ್ರಾಮಗಳಲ್ಲೇ ಕರೆಸಿ ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಪ್ರಯತ್ನ ಗಳು ಅವರಿಗೆ ವಿಭಿನ್ನ ಗುರುತನ್ನು ತಂದವು.

ಆದರೆ, ಈ ಕಾರ್ಯಕ್ರಮಗಳಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಸಮರ್ಪಕ ಸ್ಥಾನಮಾನ ನೀಡಲಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ನೊಳಗೇ ವ್ಯಕ್ತವಾಗಿತ್ತು. ಕೆಲವು ಸಮುದಾಯಗಳ ಮುಖಂಡರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಬೇಸರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಅಂಶಗಳು ಈಗ ಸಚಿವ ಸ್ಥಾನ ಚರ್ಚೆಯ ಸಂದರ್ಭದಲ್ಲೂ ಮರುಕಳಿಸುತ್ತಿವೆ.

ಆದರೂ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(
Chief Minister DK Shivakumar, former Chief Minister Siddaramaiah
) ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕತ್ವದೊಂದಿಗೆ ಪ್ರದೀಪ್ ಈಶ್ವರ್ ಉತ್ತಮ ಸಂಪರ್ಕ ಹೊಂದಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಹೈಕಮಾಂಡ್ ಅಂತಿಮವಾಗಿ ಯುವ ನಾಯಕತ್ವಕ್ಕೆ ಆದ್ಯತೆ ನೀಡಿದರೆ ಅಥವಾ ಅಹಿಂದ ಸಮೀಕರಣಕ್ಕೆ ಒತ್ತು ನೀಡಿದರೆ ಅವರ ಅವಕಾಶಗಳು ಹೆಚ್ಚಾಗಬಹುದು ಎಂಬ ರಾಜಕೀಯ ವಿಶ್ಲೇಷಣೆ ವ್ಯಕ್ತವಾಗುತ್ತಿದೆ.

ಬಲಿಜ ಸಮುದಾಯದ ನಾಯಕನಾಗಿರುವ ಪ್ರದೀಪ್ ಈಶ್ವರ್ ಸಚಿವ ಸಂಪುಟಕ್ಕೆ ಸೇರ್ಪಡೆ ಯಾದರೆ, ಆ ಸಮುದಾಯದಿಂದ ರಾಜ್ಯ ರಾಜಕೀಯದಲ್ಲಿ ಹೊಸ ಪ್ರತಿನಿಧಿತ್ವಕ್ಕೆ ದಾರಿ ತೆರೆಯುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಆದರೆ ಸಚಿವ ಸಂಪುಟ ರಚನೆಯ ಅಂತಿಮ ನಿರ್ಧಾರ ಸಂಪೂರ್ಣವಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರ ವಿವೇಚನೆಗೆ ಒಳಪಟ್ಟಿರುವುದರಿಂದ, ಈ ಎಲ್ಲ ರಾಜಕೀಯ ಲೆಕ್ಕಾಚಾರಗಳಿಗೆ ಅಂತಿಮ ಉತ್ತರ ಅಧಿಕೃತ ಘೋಷಣೆಯ ನಂತರವೇ ಸಿಗಲಿದೆ. ಅಷ್ಟರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ಊಹಾಪೋಹಗಳು ಮುಂದುವರಿಯಲಿವೆ.