ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mobile-based Digital Census: ಮೊಬೈಲ್ ಆಧಾರಿತ ಡಿಜಿಟಲ್ ಜನಗಣತಿಗೆ ಸಿದ್ಧತೆ; ಗಣತಿದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚನೆ

ದೇಶದಲ್ಲಿ 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಮೊಬೈಲ್ ಆಧಾರಿತ ಡಿಜಿಟಲ್ ಜನಗಣತಿ(Mobile-based Digital Census) ಕೈಗೊಳ್ಳಲಾಗುತ್ತಿದೆ. 2011ರಲ್ಲಿ ಕೊನೆಯ ಬಾರಿ ಜನಗಣತಿ ನಡೆದಿದ್ದು, ಇದೀಗ 2027ರ ಜನಗಣತಿ ಕಾರ್ಯವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ನಡೆಸಲಾಗುತ್ತಿದೆ. ಈ ಬಾರಿ ಲಿಖಿತ ದಾಖಲೆಗಳ ಬದಲಿಗೆ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ಮಾಹಿತಿ ಸಂಗ್ರಹಣೆಯಲ್ಲಿ ನಿಖರತೆ, ವೇಗ ಮತ್ತು ಕಾರ್ಯದಕ್ಷತೆ ಹೆಚ್ಚಲಿದೆ.

ಚಿಕ್ಕಬಳ್ಳಾಪುರ: ದೇಶದ ಅಭಿವೃದ್ಧಿ ಯೋಜನೆಗಳು ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲು ಜನಗಣತಿ(Census) ಅತ್ಯಂತ ಮಹತ್ವದ ಆಧಾರವಾಗಿದೆ. ಜನಗಣತಿ ಮೂಲಕ ಸಂಗ್ರಹಿಸುವ ನಿಖರ ಮಾಹಿತಿಯು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಗಣತಿದಾರರಿಗೆ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

16 ವರ್ಷಗಳ ಬಳಿಕ ಡಿಜಿಟಲ್ ಜನಗಣತಿ

ದೇಶದಲ್ಲಿ 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಮೊಬೈಲ್ ಆಧಾರಿತ ಡಿಜಿಟಲ್ ಜನಗಣತಿ(Mobile-based Digital Census) ಕೈಗೊಳ್ಳಲಾಗುತ್ತಿದೆ. 2011ರಲ್ಲಿ ಕೊನೆಯ ಬಾರಿ ಜನಗಣತಿ ನಡೆದಿದ್ದು, ಇದೀಗ 2027ರ ಜನಗಣತಿ ಕಾರ್ಯವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ನಡೆಸಲಾಗುತ್ತಿದೆ. ಈ ಬಾರಿ ಲಿಖಿತ ದಾಖಲೆಗಳ ಬದಲಿಗೆ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ಮಾಹಿತಿ ಸಂಗ್ರಹಣೆಯಲ್ಲಿ ನಿಖರತೆ, ವೇಗ ಮತ್ತು ಕಾರ್ಯದಕ್ಷತೆ ಹೆಚ್ಚಲಿದೆ ಎಂದರು.

ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳಲ್ಲಿ ಸಂಸದೀಯ ಮೌಲ್ಯ, ನಾಯಕತ್ವ ಗುಣ ಬೆಳೆಸಲು ಅಣಕು ಯುವ ಸಂಸತ್ ಸಹಕಾರಿ: ನ್ಯಾ. ರಾಮಲಿಂಗೇಗೌಡ

ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಜಿಲ್ಲೆಯಲ್ಲಿ 2026ರ ಏಪ್ರಿಲ್ 16ರಿಂದ ಮೇ 15ರವರೆಗೆ ನಡೆದಿದೆ. ಎರಡನೇ ಹಂತದ ಜನಸಂಖ್ಯಾ ಗಣತಿ ಕಾರ್ಯವು 2027ರ ಜನವರಿ 10ರಿಂದ 24ರವರೆಗೆ ಸ್ವಯಂ ಗಣತಿ ಮೂಲಕ ಹಾಗೂ ಜನವರಿ 25ರಿಂದ ಫೆಬ್ರವರಿ 28ರವರೆಗೆ ಮನೆಮನೆಗೆ ತೆರಳಿ ನಡೆಯಲಿದೆ. ಈ ಹಂತದಲ್ಲಿ ಪ್ರತಿ ಕುಟುಂಬದ ಸದಸ್ಯರ ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.

ಜನಗಣತಿ ಕಾರ್ಯದ ಯಶಸ್ಸಿನಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರ ಪಾತ್ರ ಮಹತ್ವದ್ದಾಗಿದೆ. ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೊಬೈಲ್ ಅಪ್ಲಿಕೇಷನ್ ಬಳಕೆ ಹಾಗೂ ಮಾಹಿತಿ ಸಂಗ್ರಹಣೆಯ ವಿಧಾನಗಳ ಕುರಿತು ಸಂಪೂರ್ಣ ಅರಿವು ಪಡೆಯಬೇಕು. ಯಾವುದೇ ಮಾಹಿತಿ ಕುರಿತು ಗೊಂದಲವಿದ್ದಲ್ಲಿ ತರಬೇತುದಾರರಿಂದ ಸ್ಪಷ್ಟನೆ ಪಡೆದುಕೊಳ್ಳಬೇಕು. ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ನಿಖರವಾಗಿ ದಾಖಲಿಸುವ ಮೂಲಕ ಜನಗಣತಿ ಕಾರ್ಯವನ್ನು ಯಶಸ್ವಿ ಗೊಳಿಸಬೇಕು ಎಂದು ಸೂಚಿಸಿದರು.

ಜನಗಣತಿ ನಿರ್ದೇಶನಾಲಯದ ಉಪನಿರ್ದೇಶಕಿ ಟಿ.ವಿ. ಧನ್ಯ, ಜಿಲ್ಲಾ ನೋಡಲ್ ಅಧಿಕಾರಿ ಅಶ್ವತಿ ಗೋಪಾಲ್ ಹಾಗೂ ತಾಂತ್ರಿಕ ಅಧಿಕಾರಿ ಅಕ್ಷಯ್ ಅವರು ಗಣತಿದಾರರಿಗೆ ವಿವರವಾದ ತರಬೇತಿ ನೀಡಿದರು.

ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಶೋಭಿತಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿ ಗಳು, ಗಣತಿದಾರರು, ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಉಪಸ್ಥಿತ ರಿದ್ದರು.