ಚಿಕ್ಕಬಳ್ಳಾಪುರ: ಯುವಜನರನ್ನು ಸಂಘಟಿಸಿ ಅವರಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆ ಗಾರಿಕೆ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಕ್ರಿಯಗೊಳಿಸುವ ಉದ್ದೇಶ ದಿಂದ ಜಿಲ್ಲೆಯ ಎಲ್ಲಾ 154 ಗ್ರಾಮ ಪಂಚಾಯಿತಿಗಳು ಹಾಗೂ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು 16 ರಿಂದ 35 ವರ್ಷದೊಳಗಿನ 100 ಯುವಕರನ್ನು ಒಳಗೊಂಡಂತೆ ಪ್ರತಿ ಘಟಕವನ್ನು ಹೇಗೆ ರಚಿಸಬೇಕು, ಯುವ ಸಂಘಗಳ ನೋಂದಣಿ ಪ್ರಕ್ರಿಯೆ, ಮೂಲಸೌಕರ್ಯ, ಘಟಕದ ಆಡಳಿತ ಹಾಗೂ ಕಾರ್ಯಕಾರಿ ಸಮಿತಿ ರಚನೆ, ಅನುದಾನ ಹಂಚಿಕೆ ಮತ್ತು ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಇದನ್ನೂ ಓದಿ: Chikkaballapur News: ಮೃತ ನೌಕರರ ಕುಟುಂಬಕ್ಕೆ ತಿಂಗಳೊಳಗೆ ಅನುಕಂಪದ ನೇಮಕಾತಿ ಆದೇಶ
ಯುವ ಸಂಘಗಳ ಪ್ರಮುಖ ಕರ್ತವ್ಯ ಮತ್ತು ಜವಾಬ್ದಾರಿಗಳು, ಹಣಕಾಸು ನಿರ್ವಹಣಾ ಮಾದರಿ, ಅನುದಾನ ಬಳಕೆ, ಯುವ ಚಟುವಟಿಕೆಗಳ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ಉಸ್ತುವಾರಿ ಅಧಿಕಾರಿಗಳ ನೇಮಕವನ್ನು ಸರ್ಕಾರದ ಆದೇಶದಂತೆ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ದೇಶಿಸಲಾಯಿತು.
ಯುವಜನರನ್ನು ಸ್ಥಳೀಯ ಮಟ್ಟದಲ್ಲಿಯೇ ಸಂಘಟಿಸಿ, ಅವರ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಮಾಜಮುಖಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಂಘಗಳು ವೇದಿಕೆಯಾಗಬೇಕು. ಸಂಘಗಳ ರಚನೆಯ ನಂತರ ಅವುಗಳ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಪರ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.