ಚಿಕ್ಕಬಳ್ಳಾಪುರ : ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಜು.27 ರಿಂದ 29ರವರೆಗೆ ನಡೆಯಲಿರುವ ಗುರುಪೂಜಾ ಸಂಗೀತೋ ತ್ಸವದ ಕುರಿತಾಗಿ ಪೂರ್ವಭಾವಿ ಸಭೆಯನ್ನು ಕೈವಾರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಗುರುಹುಣ್ಣಿಮೆಯ ಅಂಗವಾಗಿ ಶ್ರೀಕ್ಷೇತ್ರ ಕೈವಾರದಲ್ಲಿ ಹಲವಾರು ವರ್ಷಗಳಿಂದಲೂ ವೈಶಿಷ್ಟ್ಯತೆಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೈವಾರದ ಶ್ರೀಯೋಗಿನಾರೇಯಣ ತಾತಯ್ಯನವರು ತತ್ವಬೋಧನೆಗಳಿಂದ ಕೂಡಿರುವ ಹಲವಾರು ಕೀರ್ತನೆ, ಶತಕಗಳನ್ನು ಬರೆದು ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಅವರು ರಚಿಸಿರುವ ಕೀರ್ತನೆಗಳನ್ನು ಭಜನೆಯ ರೂಪದಲ್ಲಿ ಹಾಡುತ್ತಾ ಜನಸಮೂಹಕ್ಕೆ ತಲುಪಿಸುವ ಕೆಲಸವನ್ನು ಸಹಸ್ರಾರು ಭಜನಾ ತಂಡಗಳು ಸಕ್ರಿಯವಾಗಿ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ಗುರುಪೂಜಾ ಸಂಗೀತೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ಶ್ರೀಕ್ಷೇತ್ರ ಕೈವಾರದಲ್ಲಿ ಸುಮಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನಿರಂತರ 72 ಗಂಟೆಗಳ ಕಾಲ ನಡೆಯಲಿರುವ ನಾದೋಪಾಸನೆಯಲ್ಲಿ ಆಸಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಷ್ಟçಮಟ್ಟದ ಖ್ಯಾತ ಸಂಗೀತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರೂ ಮತ್ತು ಸಹಸ್ರಾರು ಭಜನಾ ತಂಡಗಳು ಈ ನಾದೋಪಾಸನೆಯಲ್ಲಿ ಭಾಗವಹಿಸಿ ಸಂಗೀತ ಸೇವೆಯನ್ನು ತಾತಯ್ಯ ನವರಿಗೆ ಸಮರ್ಪಿಸಲಿದ್ದಾರೆ ಎಂದರು.
ಕೈವಾರದ ಗುರುಪೂಜೆ ಸಂಗೀತೋತ್ಸವವು ಈ ನಾಡಿನ ಸಾಂಸ್ಕöÈತಿಕ ಹಬ್ಬವಾಗಿದೆ. ಎಲ್ಲಾ ಪ್ರಕಾರದ ಕಲೆಗಳನ್ನು ಮೂರು ದಿನಗಳ ಕಾಲ ಭಕ್ತರು ಬಂದು ತಾತಯ್ಯನವರಿಗೆ ಸಮರ್ಪಣೆ ಯನ್ನು ಮಾಡಲಿದ್ದಾರೆ. ಮಾನವರಲ್ಲಿ ಸಮಾನತೆಯನ್ನು ಸಾರಿದ ಸಂತ ಕೈವಾರ ತಾತಯ್ಯನವರ ಭಕ್ತರು ಗುರುಪೂಜೆಗೆ ನಾನಾ ಭಾಗಗಳಿಂದ ಆಗಮಿಸುತ್ತಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಹಲವಾರು ಭಾಗಗಳಿಂದ ಆಗಮಿಸಿದ್ದ ಭಜನಾ ಭಕ್ತರು ತಮ್ಮ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಆಹ್ವಾನ ಪತ್ರಿಕೆಗಳನ್ನು ಎಲ್ಲರಿಗೂ ತಲುಪಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಡಾ||ಮದ್ದೇರಿ ಮುನಿರೆಡ್ಡಿ, ಬಂಗಾರಪೇಟೆ ಕೆ.ವಿ.ಸುರೇಶ್, ಮಾಲೂರಿನ ವಕೀಲ ನಾರಾಯಣಸ್ವಾಮಿ, ಕೋಲಾರದ ವೆಂಕಟಕೃಷ್ಣಯ್ಯ ಶೆಟ್ಟಿ, ಉಪನ್ಯಾಸಕ ವೆಂಕಟರವಣಪ್ಪ, ಹಿಂದೂಪುರ ರವಿ, ಕದರಿ ದಸ್ತಗೀರ್ ಸಾಬ್, ಕುಪ್ಪಂ ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.