ಶಿಡ್ಲಘಟ್ಟ: ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರ ಸ್ವಂತ ಗ್ರಾಮಗಳಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್(MLA B N Ravikumar) ತಿಳಿಸಿದರು.
ತಾಲೂಕಿನ ಚಿಲಕಲನೇರ್ಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪ್ರಜಾ ಸೇವಾ(Praja Seva) ಆಂದೋಲನ ಹಾಗೂ ಜನಸ್ಪಂದನಾ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಪ್ರಜಾ ಸೇವಾ ಆಂದೋಲನ ಆಯೋಜಿಸಲಾಗುತ್ತಿದೆ. ಚಿಲಕಲನೇರ್ಪು ವ್ಯಾಪ್ತಿಯಲ್ಲಿ ಏಳನೇ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಇಲಾಖೆಗಳ ಯೋಜನೆಗಳು ಹಾಗೂ ಸೌಲಭ್ಯಗಳ ಮಾಹಿತಿ ಪಡೆದು ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 56 ಸಾವಿರ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: B N Ravikumar: ಮೀಸಲಾತಿ ಲೆಕ್ಕಾಚಾರ ಏನೇ ಇರಲಿ, ಗೆಲುವು ನಮ್ಮದೇ: ಶಾಸಕ ಬಿ.ಎನ್.ರವಿಕುಮಾರ್
ಉಪವಿಭಾಗಾಧಿಕಾರಿ ಶೋಭಿತ ಮಾತನಾಡಿ, ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವರ ಊರಿನಲ್ಲಿಯೇ ಸಮಸ್ಯೆಗಳನ್ನು ಪರಿಹರಿಸು ವುದು ಪ್ರಜಾ ಸೇವಾ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಐಪಿಜಿಎಸ್ ಪೋರ್ಟಲ್ನಲ್ಲಿ ದಾಖಲಿಸಿದಾಗ ಮಾತ್ರ ಅವು ಅಧಿಕೃತವಾಗಿ ಪರಿಗಣನೆ ಯಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಶಾಸಕ ರವಿಕುಮಾರ್ ಅವರು ಇಲಾಖಾವಾರು ಮಳಿಗೆಗಳಿಗೆ ಭೇಟಿ ನೀಡಿ ಯೋಜನೆಗಳ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವುಗಳ ಪರಿಹಾರಕ್ಕೆ ಸಂಬಂಧಿಸಿ ದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್., ಆಡಳಿತಾಧಿಕಾರಿ ಅಬೀದ್ ಎಸ್.ಎಸ್., ತಹಸೀಲ್ದಾರ್ ಗಗನ ಸಿಂಧು, ಚೇಳೂರು ತಹಸೀಲ್ದಾರ್ ಶ್ವೇತಾ, ಚೇಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರಪ್ಪ ಸೇರಿದಂತೆ ಶಿಡ್ಲಘಟ್ಟ ಮತ್ತು ಚೇಳೂರು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.