ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ವಿಭಾಗೀಯ ಕಚೇರಿ ಎದರು ನೌಕರರಿಂದ ಸಂಘಟಿತ ಪ್ರತಿಭಟನೆ ದಾಖಲು
ಚಿಕ್ಕಬಳ್ಳಾಪುರ: ವಿದ್ಯುತ್ ಖಾಸಗೀಕರಣ(Privatization of electricity) ಮಾಡುವುದು ಎಂದರೆ ಸಾಮಾಜಿಕ ನ್ಯಾಯದ ಹರಣ ಮಾಡಿದಂತೆ. ಇದು ನೂರಾರು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದ ಸೇವಾ ವಲಯವನ್ನು ಇಲ್ಲವಾಗಿಸುವ ವ್ಯವಸ್ಥಿತ ಹುನ್ನಾರವಾಗಿದೆ. ಈ ಕೂಡಲೇ ಸರಕಾರ ಟಾಟಾ ಪವರ್ ಪ್ರಸ್ತಾವಿತ ಮನವಿಯನ್ನು ತಿರಸ್ಕರಿಸಬೇಕು ಎಂದು ಬೆಸ್ಕಾಂ(BESCOM) ನೌಕರರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.
ನಗರದ ವಾಪಸಂದ್ರದಲ್ಲಿರುವ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ಬೆಸ್ಕಾಂ ಖಾಸಗೀಕರಣ( BESCOM privatization) ವಿರೋಧಿಸಿ ಪ್ರತಿಭಟನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು ನೌಕರರು ಖಾಸಗೀಕರಣ ಮಾಡದಂತೆ ಘೋಷಣೆ ಕೂಗುವ ಮೂಲಕ ಸರಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: BESCOM staff protest: ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ವಿಭಾಗೀಯ ಕಚೇರಿ ಎದುರು ನೌಕರರಿಂದ ಸಂಘಟಿತ ಪ್ರತಿಭಟನೆ ದಾಖಲು
ಈ ವೇಳೆ, ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ವೇಣುಗೋಪಾಲ್, ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1902ರಲ್ಲಿ ಶಿವನಸಮುದ್ರ ದಲ್ಲಿ ವಿದ್ಯುತ್ ಕಂಡು ಹಿಡಿದಗಿನಿಂದ ಮೊದಲಾಗಿ ಇಲ್ಲಿಯವರೆಗೆ ಬೆಸ್ಕಾಂ ನೌಕರರು ಈ ಕ್ಷೇತ್ರ ದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಜನಸಂಖ್ಯೆ ಬೆಳೆದಂತೆ ನಾಗರೀಕರ ಬೇಡಿಕೆಗಳನ್ನು ಆದ್ಯತಾನುಸಾರ ಶಿರಸಾವಹಿಸಿ ಮಾಡಿಕೊಂಡು ಬರಲಾಗುತ್ತಿದೆ. ಇಂತಹ ಬಲಿಷ್ಠ ಕ್ಷೇತ್ರವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.
ವಿದ್ಯುತ್ ಖಾಸಗೀಕರಣವಾದಲ್ಲಿ ಉದ್ಯೋಗಿಗಳಲ್ಲಿ ಅಭದ್ರತೆ ಸೃಷ್ಟಿಯಾಗಿ ನಿರುದ್ಯೋಗ ತಲೆಯೆತ್ತ ಲಿದೆ. ಸರಕಾರದಿಂದ ಬರುವ ಯಾವೊಂದು ಸಬ್ಸಿಡಿ, ಉಚಿತ ಯೋಜನೆಗಳು ಹಳ್ಳ ಹಿಡಿಯಲಿವೆ. ವಿಶೇಷವಾಗಿ ರೈತರು ದೀನದಲಿತರ ಪಾಲಿಗೆ ಮರಣಶಾಸನವಾಗಲಿದೆ. ಹೀಗಾಗಿ, ಯಾವುದೇ ಕಾರಣ ಕ್ಕೂ ಸರಕಾರ ಖಾಸಗಿ ವಿತರಣೆಗೆ ಅವಕಾಶ ಮಾಡಿಕೊಡಬಾರದು ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಕೇಂದ್ರ ಸರ್ಕಾರ 2020ರಲ್ಲಿ ಬೆಸ್ಕಾಂ, ಚೆಸ್ಕಾಂ, ಜೆಸ್ಕಾಂ(BESCOM, CHECOM, ZESCOM) ಸೇರಿ 3 ಎಸ್ಕಾಂಗಳನ್ನು ಖಾಸಗೀಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮುಂದಿಟ್ಟಿತ್ತು. ಆದರೆ ಕರ್ನಾಟಕ ಸರ್ಕಾರ "ರಾಜ್ಯದ ಎಸ್ಕಾಂಗಳು ಆರ್ಥಿಕವಾಗಿ ಸದೃಢವಾಗಿವೆ, ಈಗ ಖಾಸಗೀ ಕರಣದ ಅಗತ್ಯವಿಲ್ಲ" ಎಂದು ತಿರಸ್ಕರಿಸಿತ್ತು.
ಆದರೆ 2003ರ ವಿದ್ಯುತ್ ಕಾಯಿದೆ ಸೆಕ್ಷನ್ 14 ಅಡಿ ಖಾಸಗಿ ಕಂಪನಿಗಳೂ ಕೂಡ ವಿತರಣಾ ಪರವಾನಿಗೆಗೆ ಅರ್ಜಿ ಹಾಕಬಹುದು ಎಂಬ ಅಂಶವಿದೆ. ಇದನ್ನೇ ಮುಂದು ಮಾಡಿ ಕೊಂಡು 20 ವರ್ಷಗಳಿಂದ ಇದ್ದ ಈ ಕಾನೂನು ಬಳಸಿಕೊಂಡು ಖಾಸಗಿ ವಿತರಣೆಗೆ ಅವಕಾಶ ನೀಡಿ ಎಂದು ಇದೇ ಮೊದಲ ಬಾರಿಗೆ ಟಾಟಾ ಪವರ್ ಎಂಬ ಖಾಸಗಿ ಕಂಪನಿ ಕೆಇಆರ್‌ಸಿಗೆ ಅರ್ಜಿ ಹಾಕಿದೆ. ಇದೇ ನೌಕರರ ಆತಂಕಕ್ಕೆ ಕಾರಣವಾಗಿದೆ ಎಂದರು.
2003ರ ವಿದ್ಯುತ್ ಕಾಯಿದೆ ಸೆಕ್ಷನ್ 14 ಅಡಿ ಖಾಸಗಿ ಕಂಪನಿಗಳು ವಿತರಣಾ ಪರವಾನಿಗೆಗೆ ಅರ್ಜಿ ಹಾಕಿರುವ ಟಾಟಾ ಪವರ್ ಎಂಬ ಖಾಸಗಿ ಸಂಸ್ಥೆಯು ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ಗ್ರಾಮಾಂ ತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆಗೆ ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಿದೆ.
ಹೀಗಾಗಿ, ಇದಕ್ಕೆ ಸಂಬಂಧಿಸಿದಂತೆ ಕೆಇಆರ್‌ಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸ ಲಾಗಿದೆ. ಜೂ.23 ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನವಾಗಿದೆ. ದಯವಿಟ್ಟು ರೈತರು, ಕಾರ್ಮಿಕರು ಸಂಘ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಆಕ್ಷೇಪಣೆ ಸಲ್ಲಿಸುವ ಮೂಲಕ ವಿದ್ಯುತ್ ಖಾಸಗೀಕರಣ ನಿಲ್ಲಿಸ ಬೇಕು ಎಂದರು.
ಆದರೆ ಈ ಸಂಬಂಧ ಮಾಧ್ಯಮದವರು ಬೆಸ್ಕಾಂ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಇಂಜನಿಯರ್ ರಮೇಶ್ ಕುಮಾರ್ ಅವರ ಪ್ರತಿಕ್ರಿಯೆ ಕೇಳಿದರೆ ನಾವು ಸರಕಾರದ ವಿರುದ್ಧ ಯಾವುದೇ ಹೇಳಿಕೆ ಕೊಡುವಂತಿಲ್ಲ. ಕೆಇಆರ್‌ಸಿ ಎದುರು ಟಾಟಾ ಪವರ್ ಸಂಸ್ಥೆ ಅರ್ಜಿ ಹಾಕಿರು ವುದು ನಿಜ. ಇದನ್ನೇ ನೌಕರರು ಖಾಸಗೀಕರಣ ಎಂದು ದೂರುತ್ತಿದ್ದಾರೆ ಎಂದರು.
ಬೆಸ್ಕಾಂ ಪೂರ್ತಿ ಖಾಸಗೀಕರಣ ಆಗಿಲ್ಲ, ಸರ್ಕಾರದ ಒಡೆತನದಲ್ಲೇ ಇರಲಿದೆ. ಆದರೆ ಟಾಟಾ ಪವರ್‌ನಂಥ ಖಾಸಗಿ ಕಂಪನಿಗಳಿಗೆ ಬೆಸ್ಕಾಂ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವಿತರಿಸಲು ಪರವಾನಿಗೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಇದಾದಲ್ಲಿ ನಮ್ಮದೇ ಲೈನು, ನಮ್ಮದೇ ಟಿ.ಸಿ, ನಮ್ಮದೇ ಪವರ್ ಸ್ಟೇಷನ್ ಆದರೆ ಅವರು ಮೀಟರ್‌ಗಳನ್ನು ಹಾಕಿಕೊಳ್ಳುತ್ತಾರೆ.ಇದೊಂತರ ಬಿಎಸ್‌ಎನ್‌ಎಲ್ ಮತ್ತು ಏರ್‌ಟೆಲ್, ಜಿಯೋ ನಡುವಿನ ಸ್ಪರ್ಧೆಯಂತಾಗಲಿದೆ ಎಂದರು.
ಬೆಸ್ಕಾಂ ಜಿಲ್ಲಾ ನೌಕರರ ಸಂಘದ ಗೋವರ್ಧನ್ ಸಾಗರ್ ಮಾತನಾಡಿ, ವಿದ್ಯುತ್ ಖಾಸಗೀಕರಣ ಎನ್ನುವುದು ಅವೈಜ್ಞಾನಿಕ ತೀರ್ಮಾನವಾಗಿದೆ. ಶತಮಾನಕ್ಕೂ ಹೆಚ್ಚು ಕಾಲದಿಂದ ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಸರಕಾರಿ ವಿದ್ಯುತ್ ಕ್ಷೇತ್ರವನ್ನು ನಂಬಿಕೊಂಡು ಲಕ್ಷಾಂತರ ಅಧಿಕಾರಿ ನೌಕರ ಕುಟುಂಬಗಳು ಜೀವನ ನಡೆಸುತ್ತಿವೆ. ಇದೇ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕೆಂಬ ಹಂಬಲದಲ್ಲಿ ಅನೇಕರು ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ನಾಗರೀಕರ ಸೇವಾ ಕ್ಷೇತ್ರವನ್ನು ಏಕಾಏಕಿ ಖಾಸಗೀ ಕರಣಕ್ಕೆ ಒಳಪಡಿಸುವುದು ಸರ್ವಥಾ ಸರಿಯಲ್ಲ ಎಂದ ಅವರು "ಖಾಸಗಿಯವರಿಗೆ ವಹಿಸಿದರೆ ಗ್ರಾಹಕರಿಂದ ಸುಲಿಗೆ ಪ್ರಾರಂಭವಾಗಲಿದೆ. ರೈತರು, ನೌಕರರು ಅವನತಿ ಹೊಂದಿ ಬೀದಿಗೆ ಬರುವ ಪರಿಸ್ಥಿತಿ" ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ವೇಣುಗೋಪಾಲ್, ಬೆಸ್ಕಾಂ ನೌಕರರ ಸಂಘದ ಬೆವಿಕಂ ಉಪಾಧ್ಯಕ್ಷ ಕೆ.ಶ್ರೀನಿವಾಸ್, ಬೆಸ್ಕಾಂ ಜಿಲ್ಲಾ ನೌಕರರ ಸಂಘದ ಗೋವರ್ಧನ್ ಸಾಗರ್, ಕಾರ್ಯದರ್ಶಿಗಳಾದ ಮೂರ್ತಿ ಮತ್ತಿತರರು ಇದ್ದರು.