ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CITU: ಸಿಐಟಿಯುನಿಂದ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಪ್ರತಿಭಟನೆ

ಕರ್ನಾಟಕ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಿ, ಪ್ರತಿ ಉದ್ದಿಮೆಗೆ ಪ್ರತ್ಯೇಕ ವಾಗಿ ಕನಿಷ್ಠ ವೇತನ ನಿಗದಿ ಮಾಡದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತದೆ. ಆದರೆ ಇದರಲ್ಲಿರುವ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು

ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಚಿಕ್ಕಬಳ್ಳಾಪುರ: ಮಾಸಿಕ ಸರಾಸರಿ ರೂ. 36 ಸಾವಿರ ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿಗಳಿಗಾಗಿ ಹಾಗೂ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ ಒತ್ತಾಯಿಸಿ ಶನಿವಾರ ಜಿಲ್ಲಾಡಳಿತ ಭವನದ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ ,ಕರ್ನಾಟಕ ರಾಜ್ಯ ಸರ್ಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಿ, ಪ್ರತಿ ಉದ್ದಿಮೆಗೆ ಪ್ರತ್ಯೇಕ ವಾಗಿ ಕನಿಷ್ಠ ವೇತನ ನಿಗದಿ ಮಾಡದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತದೆ. ಆದರೆ ಇದರಲ್ಲಿರುವ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಮತ್ತು ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ ಐತಿಹಾಸಿಕ 'ರೆಪ್ತಕೋಸ್ ಬ್ರೆಟ್ ಅಂಡ್ ಕಂ' ಪ್ರಕರಣದಲ್ಲಿ ನಿಗದಿ ಪಡಿಸಿದ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸ ಬೇಕೆಂಬುದು ಕರ್ನಾಟಕ ಹೈಕೋರ್ಟ್ ನಿರ್ದೇಶನ ಹಾಗೂ ಸಿಐಟಿಯು, ಕಾರ್ಮಿಕ ಸಂಘಟನೆಗಳ ಆಗ್ರಹವಾಗಿತ್ತು.

ಇದನ್ನೂ ಓದಿ: CITU: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ

ರಾಜ್ಯ ಸರ್ಕಾರ ಪ್ರಕಟಿಸಿರುವ ಕನಿಷ್ಠ ವೇತನದಿಂದ ಒಂದು ಕೋಟಿಗಿಂತ ಹೆಚ್ಚಿನ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂಬುದನ್ನು ಸಿಐಟಿಯು ಮನಗಾಣುತ್ತಲೇ ಹೆಚ್ಚಳ ಮಾಡಿರುವ ಕನಿಷ್ಠ ವೇತನವು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಇವತ್ತಿನ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ 2025 ಏಪ್ರಿಲ್ 11 ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ತರುವ ಬದಲಾಗಿ 2026 ಮೇ 22 ರಂದು ಅಧಿಸೂಚನೆ ಹೊರಡಿಸಿದ ದಿನದಿಂದ ಜಾರಿಗೆ ತಂದಿರುವುದು ಬಹುಸಂಖ್ಯಾತ ಕಾರ್ಮಿಕರಿಗೆ ಒಂದು ವರ್ಗದ ಅರಿಯರ್ಸ್ ಸಿಗದಂತೆ ಮಾಡಿದೆ. ಹಾಗಾಗಿ ಕನಿಷ್ಠ ವೇತನವನ್ನು ಏಪ್ರಿಲ್ 2025 ರಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು. 

ಈ ಅಧಿಸೂಚನೆಯಿಂದ ಗಾಮೆರ್ಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿ 19 ವಿಭಾಗದ ಉದ್ದಿಮೆಗಳನ್ನು ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮದಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗ ಲಿದ್ದಾರೆ. ಪ್ರಸ್ತುತ ಮೇ 22 ರಂದು ಜಾರಿಗೆ ತಂದಿರುವ ಕನಿಷ್ಠ ವೇತನವನ್ನೆ ಈ 19 ಉದ್ದಿಮೆಗಳಿಗೂ ವಿಸ್ತರಿಸಿ ಕೂಡಲೇ ಅಧಿಸೂಚನೆ ಹೊರಡಿಸಬೇಕು. ಸ್ತ್ರೀಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕೆಂಬುದು ಸಿಐಟಿಯು ಒತ್ತಾಸೆಯಾಗಿದೆ ಎಂದರು.

ಸಿಐಟಿಯು(CITU ಪ್ರಧಾನ ಕಾರ್ಯದರ್ಶಿ ಜಿ.ಎಂ.ಲಕ್ಷ್ಮೀದೇವಮ್ಮ ಮಾತನಾಡಿ,ಕೇಂದ್ರ ಸರ್ಕಾರವು 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ನಿಯಮಗಳನ್ನು ರೂಪಿಸಿ ಮೇ 8 ರಿಂದ ಜಾರಿಗೊಳಿಸಿದೆ. ಇದರಿಂದ ಕಾರ್ಮಿಕ ವರ್ಗವು ಸ್ವಾತಂತ್ಯ ಪೂರ್ವದಿಂದಲೂ ಹೋರಾಟಗಳಿಂದ ಪಡೆದಿರುವ ಮೂಲಭೂತ ಹಕ್ಕುಗಳು ಮೊಟಕುಗೊಳ್ಳಲಿದೆ ಎಂದರು.

ಶ್ರಮದ ಶೋಷಣೆ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಇರುವ ಕೈಗಾರಿಕಾ ಸಂಬಂಧಗಳಿಗೆ ದಕ್ಕೆಯಾಗಲಿದೆ. ಇದು ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗಲಿದೆ. ಆದ್ದರಿಂದ ಕಾರ್ಮಿಕರನ್ನು ನವಗುಲಾಮಗಿರಿಗೆ ದೂಡುವ ಕೇಂದ್ರ ಸರ್ಕಾರದ ನಾಲ್ಕು ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ದೇಶದ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರ ಈ ನಾಲ್ಕು ಸಂಹಿತೆಗ ಕಾರ್ಮಿಕರ ಪರವಾದ ಕರ್ನಾಟಕ ತಿದ್ದುಪಡಿಗಳನ್ನು ತರಬೇಕು. ನಂತರ ನಿಯಮಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಬಿ.ಎನ್.ಮುನಿಕೃಷ್ಣಪ್ಪ,ಮುಸ್ತಾಫ, ವೆಂಕಟಲಕ್ಷ್ಮಮ್ಮ, ರತ್ನಮ್ಮ, ಮಂಜುಳ,ಪಾಪಣ್ಣ, ಶ್ರೀನಿವಾಸ್, ಮತ್ತಿತರರು ಇದ್ದರು.