ಶಿಡ್ಲಘಟ್ಟ: ಸರ್ಕಾರಿ ಆಡಳಿತ ಮತ್ತು ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪ್ರಜಾ ಸೇವಾ(Praja Seva) ಆಂದೋಲನವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಸಾರ್ವಜನಿ ಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದರೆ, ಅವುಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಸಕಾರಾತ್ಮಕ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.
ತಾಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವುದು, ಸರ್ಕಾರಿ ಸೇವೆಗಳ ಕುರಿತು ಅರಿವು ಮೂಡಿಸುವುದು ಹಾಗೂ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದರು.
6,788 ಅರ್ಜಿಗಳ ಸ್ವೀಕಾರ: ಜಿಲ್ಲೆಯಲ್ಲಿ ಈವರೆಗೆ ಪ್ರಜಾ ಸೇವಾ ಆಂದೋಲನದಡಿ ಒಟ್ಟು 6,788 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 2,462 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 2,641 ಅರ್ಜಿಗಳಿಗೆ ಪರಿಹಾರ ಕಲ್ಪಿಸುವ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ. ಉಳಿದ ಅರ್ಜಿಗಳನ್ನು ವಿವಿಧ ಕಚೇರಿಗಳಲ್ಲಿ ವಿಲೇವಾರಿಗಾಗಿ ಕಾಯ್ದಿರಿಸಲಾಗಿದೆ. ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಕಡ್ಡಾಯವಾಗಿ ಸ್ವೀಕೃತಿ ಪಡೆಯಬೇಕು. ಈ ಹಿಂದೆ ಅರ್ಜಿಗಳ ದಾಖಲಾತಿ ವ್ಯವಸ್ಥೆ ಯಲ್ಲಿ ಇದ್ದ ಲೋಪಗಳನ್ನು ಸರಿಪಡಿಸಿ, ಪ್ರಸ್ತುತ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದೆ. ಅರ್ಜಿಗಳ ಸ್ವೀಕೃತಿ, ದಾಖಲಾತಿ ಮತ್ತು ವಿಲೇವಾರಿಯ ಸಂಪೂರ್ಣ ಹೊಣೆಯನ್ನು ಜಿಲ್ಲಾಡಳಿತ ವಹಿಸಿಕೊಂಡಿದೆ ಎಂದು ತಿಳಿಸಿದರು.
ಪೌತಿ ಖಾತೆ ಸಮಸ್ಯೆ ನಿವಾರಣೆಗೆ ಕ್ರಮ
ಜಿಲ್ಲೆಯಲ್ಲಿ ಸುಮಾರು 2.80 ಲಕ್ಷ ಪೌತಿ ಖಾತೆ ಪ್ರಕರಣಗಳಿದ್ದು, ಈ ಪೈಕಿ ಎರಡು ಲಕ್ಷ ಪ್ರಕರಣ ಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ 80 ಸಾವಿರ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಂಗಮಕೋಟೆ ಹೋಬಳಿಯಲ್ಲಿ 10,137 ಪೌತಿ ಖಾತೆ ಪ್ರಕರಣಗಳಿದ್ದು, ಸಮಸ್ಯೆಯಿಲ್ಲದ 5,216 ಪ್ರಕರಣಗಳಲ್ಲಿ ದಾಖಲೆ ಪಡೆದು ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಲಾಗಿದೆ. ಮಹಿಳಾ ವಾರಸುದಾರರಿಗೆ ಪಾಲು ನೀಡದೆ ಉಳಿದ ಪ್ರಕರಣಗಳಲ್ಲಿ ಸಂಬಂಧಪಟ್ಟ ಎಲ್ಲರ ಹೆಸರನ್ನೂ ಸೇರಿಸಿ ಜಂಟಿ ಖಾತೆ ಮಾಡಲಾಗಿದೆ. ಬಾಕಿ ಪ್ರಕರಣಗಳ ವಿಲೇವಾರಿಗೆ ಗ್ರೇಡ್-2 ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಘಟಕ ಆರಂಭಿಸಲಾಗಿದೆ ಎಂದರು.
ಅರ್ಹರಿಗೆ ಹಕ್ಕುಪತ್ರ, ನಿವೇಶನ
ಭೂ-ಗ್ಯಾರಂಟಿ ಯೋಜನೆಯಡಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಅರ್ಹರಿಗೆ 11ಎ ಮತ್ತು 11ಬಿ ಖಾತೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಎರಡು ತಿಂಗಳೊ ಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶವಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 50 ಸಾವಿರ ನಿವೇಶನಗಳನ್ನು ವಿತರಿಸುವ ಗುರಿ ಹೊಂದಿದ್ದು, ಪ್ರತಿ ತಾಲೂಕಿಗೆ ಐದು ಸಾವಿರ ನಿವೇಶನ ಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 100 ಎಕರೆ ಜಮೀನು ಗುರುತಿಸಿದ್ದು, 50 ಎಕರೆಗೆ ಮಂಜೂರಾತಿ ದೊರೆತಿದೆ ಎಂದು ಹೇಳಿದರು.
ರೈತರ ಪಹಣಿ, ಬೆಳೆ ವಿಮೆಗೆ ಆದ್ಯತೆ
ಭೂಮಂಜೂರಾತಿ ಹಾಗೂ ಸಾಗುವಳಿ ಜಮೀನುಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಗೆ ಪೌಡಿ ಆಂದೋಲನ ನಡೆಸಲಾಗುತ್ತಿದೆ. ಈಗಾಗಲೇ ಒಂದು ಸಾವಿರ ರೈತರ ಪೌಡಿ ಕಾರ್ಯ ಪೂರ್ಣ ಗೊಳಿಸಲಾಗಿದೆ. 50/53ರ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಪ್ರತ್ಯೇಕ ಸರ್ವೆ ನಂಬರ್ ದೊರೆಯ ಲಿದ್ದು, ಮುಂದಿನ ದಿನಗಳಲ್ಲಿ ಗಡಿ ವಿವಾದಗಳು ಕಡಿಮೆಯಾಗಲಿವೆ ಎಂದರು.
ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಸುಮಾರು 150 ಕೋಟಿ ರೂ. ಪರಿಹಾರ ವಿತರಿಸುವ ಗುರಿ ಹೊಂದಲಾಗಿದೆ. ಶಿಡ್ಲಘಟ್ಟ ತಾಲೂಕಿಗೂ ಸುಮಾರು ಎಂಟು ಕೋಟಿ ರೂ. ಅನುದಾನ ಬರಲಿದೆ ಎಂದು ತಿಳಿಸಿದರು.
150 ಕೆರೆಗಳಿಗೆ ಎತ್ತಿನಹೊಳೆ ನೀರು
ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ 80 ಗ್ರಾಮಗಳ ವ್ಯಾಪ್ತಿಯಲ್ಲಿರುವ 150 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದೆ. ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರೈತರ ಜಮೀನಿನಲ್ಲಿ ಪೈಪ್ಲೈನ್ ಅಳವಡಿಸಿದರೂ ಕೃಷಿ ಚಟುವಟಿಕೆ ಮುಂದುವರಿಸಲು ಅವಕಾಶ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 70 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಜಿಲ್ಲೆಯಾದ್ಯಂತ 160 ಕೊಳವೆಬಾವಿಗಳ ಪೈಕಿ 101ರಲ್ಲಿ ನೀರು ಲಭ್ಯವಾಗಿದೆ. ಲಭ್ಯವಿರುವ ಕೊಳವೆಬಾವಿಗಳ ಮೂಲಕ ಜನರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ ಸುಮಾರು ಎಂಟು ಲಕ್ಷ ಜನರಿಗೆ ಹತ್ತು ಪ್ರಮುಖ ಕಾಯಿಲೆಗಳ ಆರೋಗ್ಯ ತಪಾಸಣೆಯನ್ನು ಮನೆಬಾಗಿಲಲ್ಲೇ ನಡೆಸುವ ಉದ್ದೇಶವಿದೆ. ಮುಂದಿನ 15 ದಿನಗಳಲ್ಲಿ ಗೃಹ ಆರೋಗ್ಯ ಅಭಿಯಾನ ಆರಂಭವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್. ರವಿಕುಮಾರ್(MLA B.N.Ravikumar), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ತಹಶೀಲ್ದಾರ್ ಗಂಗನಸಿಂಧು, ಇಒ ಹೇಮಾವತಿ, ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್, ಚಿಮುಲ್ ನಿರ್ದೇಶಕ ಬ್ಯಾಂಕ್ ಮುನಿಯಪ್ಪ, ಮುಖಂಡರಾದ ಮೇಲೂರು ಮಂಜುನಾಥ್, ಹೆಣ್ಣೂರು ಸುಬ್ರಹ್ಮಣ್ಯ, ಪಟೇಲ್ ನಾರಾಯಣಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.