ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತ (ಚಿಮುಲ್) ಆಡಳಿತ ಮಂಡಳಿಗೆ ಈ ಹಿಂದೆ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಕೆ.ಆರ್. ರಾಜಣ್ಣ ಅವರ ನಾಮನಿರ್ದೇಶನವನ್ನು ರದ್ದುಪಡಿಸಿ, ಅವರ ಸ್ಥಾನಕ್ಕೆ ಯಲುವಳ್ಳಿ ಎನ್.ರಮೇಶ್ ಅವರನ್ನು ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯು ಆಗಸ್ಟ್ 18, 2026ರಂದು ಅಧಿಸೂಚನೆ ಹೊರಡಿಸಿದೆ. ಫೆಬ್ರವರಿ 5, 2026ರಂದು ಹೊರಡಿಸಿದ್ದ ಸರ್ಕಾರದ ಅಧಿಸೂಚನೆಯಂತೆ ಚಿಮುಲ್ ಆಡಳಿತ ಮಂಡಳಿಗೆ ಚಿಕ್ಕಬಳ್ಳಾಪುರ ತಾಲೂಕಿನ ಕಾಕಲಚಿಂತ ಗ್ರಾಮದ ಕೆ.ಆರ್.ರಾಜಣ್ಣ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಇದೀಗ ಆ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: Chikkaballapur News: ಬರದ ಹೊಡೆತಕ್ಕೆ ರೈತ ಸಂಘ ಆಕ್ರೋಶ; ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಎಕೆಆರ್‌ಎಸ್ ಆಗ್ರಹ
ಇದರೊಂದಿಗೆ ಚಿಮುಲ್ ಆಡಳಿತ ಮಂಡಳಿಗೆ ಚಿಕ್ಕಬಳ್ಳಾಪುರ ತಾಲೂಕಿನ ಯಲುವಳ್ಳಿ ಗ್ರಾಮದ ಎನ್. ರಮೇಶ್ ಅವರನ್ನು ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಸಂಬಂಧಿತ ಕಲಂನಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ನೇಮಕಾತಿ ಮಾಡಲಾಗಿದೆ.
ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನಿರ್ದೇಶನ ದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ, ನೂತನ ನಾಮನಿರ್ದೇಶಿತ ಸದಸ್ಯರಾಗಿ ಯಲುವಳ್ಳಿ ಎನ್. ರಮೇಶ್ ಅವರು ಚಿಮುಲ್ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸ ಲಿದ್ದಾರೆ ಎಂದು ತಿಳಿಸಲಾಗಿದೆ.