ಚಿಕ್ಕಬಳ್ಳಾಪುರ: ಜಸ್ಟೀಸ್ ನಾಗಮೋಹನ್ ದಾಸ್ ನೀಡಿರುವ ಒಳಮೀಸಲಾತಿ ವರ್ಗೀ ಕರಣ ಸಂಬಂಧ ನೀಡಿರುವ ವರದಿಯು ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತ ದಿಂದ ಕೂಡಿರುವುದರಿಂದ ಸರಕಾರ ಈ ಕೂಡಲೇ ತಿರಸ್ಕರಿಸಬೇಕು. ಒಳಮೀಸಲಾತಿ ರಹಿತ ಹಳೇ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾ.25ರಂದು ಫ್ರೀಡಂಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸಂಘಟನಾ ಸಂಚಾಲಕ ಕೈವಾರ ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಘನ ಸುಪ್ರಿಂಕೋರ್ಟ್ ಒಳಮೀಸಲಾತಿ ಸಂಬಂಧ 1 ಆಗಸ್ಟ್ 2024ರ ತನ್ನ ತೀರ್ಪಿನಲ್ಲಿ ಜಾರಿಯ ಪರಮಾಧಿಕಾರ ಆಯಾ ರಾಜ್ಯ ಸರಕಾರಗಳಿಗೆ ನೀಡಿದೆಯಲ್ಲದೆ ಅನುಕೂಲ ಸಿಂಧು ರಾಜಕೀಯಕ್ಕಾಗಿ ಮನಸ್ಸಿಗೆ ಬಂದಂತೆ ಒಳಮೀಸಲು ನೀಡಲಾಗದು. ರಾಜ್ಯ ಸರಕಾರಗಳು ಮಾಡುವ ಮೀಸಲಾತಿ ವರ್ಗೀಕರಣವು ನ್ಯಾಯಾಂಗದ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ ಆದರೂ ನಾಗಮೋಹನ್‌ದಾಸ್ ಅಧ್ಯಕ್ಷತೆ ಯಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಒಳಮೀಸಲಾತಿ ಸಂಬಂಧ ಆರ್ಥಿಕ ಸಾಮಾಜಿಕ ಔದ್ಯೋಗಿಕ, ಶೈಕ್ಷಣಿಕ ಸಮಗ್ರ ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಿಲ್ಲ. ಸುಪ್ರಿಂ ಕೋರ್ಟ್ ತೀರ್ಪಿನ ನಿರ್ದೇಶನದಂತೆ ಅಗತ್ಯ ಅಂಕಿ ಅಂಶಗಳನ್ನು ಕ್ರೋಢೀಕರಿಸದೆ 101 ಜಾತಿಗಳ ಪೈಕಿ ಹೋರಾಟದ ಹಾದಿ ತುಳಿದಿದ್ದ ಒಂದು ಜಾರಿಯನ್ನು ಓಲೈಸಲು ಬೇಕಾದಂತೆ ವರದಿ ಸಿದ್ಧಪಡಿಸಿದೆ ಎಂದು ದೂರಿದರು.
ಜಸ್ಟೀಸ್ ನಾಗಮೋಹನ್‌ದಾಸ್ ಅವರು ದುರುದ್ದೇಶದಿಂದ ಬಲಗೈ ಸಮುದಾಯದ ಜನಸಂಖ್ಯೆಯನ್ನು ಒಟ್ಟಿಗೆ ತೋರಿಸದೆ 4 ಭಾಗಗಳಾಗಿ ವಿಭಾಗಿಸಿದೆ. 1.38 ಲಕ್ಷ ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ ಸೇರಿಸಿದೆ, 2.58,915 ಜನಸಂಖ್ಯೆ ಯನ್ನು ಮಾದಿಗರ ಗುಂಪಿಗೆ ಸೇರಿಸಿದೆ.
ಸರಕಾರದ ನಿಬಂಧನೆಗಳಿಗೆ ವಿರುದ್ಧವಾಗಿ 4,74,954 ಸಂಖ್ಯೆಯನ್ನು ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರಗಳೆಂದು ವಿಂಗಡಿಸಿ ಅವರಿಗೆ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಲು ಶಿಫಾರಸ್ಸು ಮಾಡಿದ್ದಾರೆ. ಇವೆಲ್ಲಾ ಅವೈಜ್ಞಾನಿಕ ಅಂಶಗಳಾಗಿದ್ದು ಬಲಗೈ ಸಮುದಾಯ ಕ್ಕೆ ಮೀಸಲಾತಿ ಪಾಲು ಸಿಗದಂತೆ ಮಾಡುವ ಹುನ್ನಾರವಾಗಿವೆ ವಿನಃ ಬೇರೇನಲ್ಲ ಎಂದು ದೂರಿದರು.
ನಾಗಮೋಹನ್‌ದಾಸ್ ನೀಡಿದ ವರದಿಯನ್ನು ದಿನಾಂಕ 4.8.2025ರಂದು ಸರಕಾರ ಪಡೆದು 18:08:225ರ ಸಚಿವ ಸಂಪುಟದಲ್ಲಿ ಜಾರಿಯ ಒರವಾದ ನಿರ್ಣಯ ಕೈಗೊಂಡಿತು. ಆಗಲೂ ಬಲಗೈ ಸಮುದಾಯ ತೀವ್ರವಾದ ವಿರೋಧ ವ್ಯಕ್ತಪಡಿಸಿದೆ.ಆದರೂ ಸರಕಾರ ಮತ್ತೆ ದಿನಾಂಕ 03:09:2025ರಂದು ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಪರಿಶಿಷ್ಟಜಾತಿ ಬಲಗೈಜಾತಿಗಳ ಪಾಲಿಗೆ ಮರಣ ಶಾಸನವಾಗಿದ್ದು ಕೂಡಲೇ ಇದನ್ನು ತಿರಸ್ಕರಿಸಿ ಎಂದು ಸರಕಾರವನ್ನು ಆಗ್ರಹಿಸಿದರು.
ಬಲಗೈ ಜಾತಿಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಉದ್ದೇಶದಿಂದ ಕೂಡಿರುವ ಈ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ನೀಡಬೇಕು ಎಂದು ಆಗ್ರಹಿಸಿಯೇ ಒಳ ಮೀಸಲಾತಿ ರಹಿತ ಹಳೇ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾ.25ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿದ್ದು ಜಿಲ್ಲೆಯಿಂದ 50 ಸಾವಿರ ಮಂದಿ ಭಾಗಿಯಾಗುತ್ತೇವೆ ಎಂದರು.
ಹೊಲೆಯ ಮಾದಿಗರ ನಡುವೆ ಒಳಮೀಸಲಾತಿ ಜಾರಿಯು ಬೆಂಕಿ ಹಚ್ಚಿದೆ. ಹೊಲೆಯ ಸಮುದಾಯಕ್ಕೆ ಸಂಬಂಧಿಸಿದಂತೆ ಸರಕಾರ ಸಂವಿಧಾನ ವಿರೋಧಿಯಾಗಿ ರೋಸ್ಟರ್ ಬಿಂದುಗಳಲ್ಲಿ ಅನ್ಯಾಯ ಮಾಡಿದೆ. ಯಾರೋ ಒಂದಿಬ್ಬರ ಮಾತನ್ನು ಕೇಳಿಕೊಂಡು ಒತ್ತಡ ತಂತ್ರಕ್ಕೆ ಕಟ್ಟುಬಿದ್ದು ಮಾ.27ರ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿಗಳು ಮತ್ತು ಅವರ ಸಹೋದ್ಯೋಗಿಗಳು ಅನ್ಯಾಯ ಸರಿಪಡಿಸದೆ ಜಾರಿಗೆ ಸೂಚನೆ ನೀಡಿದ್ದೇ ಆದಲ್ಲಿ ಕಾಂಗ್ರೆಸ್ ಸರ್ಕಾರ ಬೀಳುವುದು ಖಚಿತ. ನಮ್ಮ ಸಮುದಾಯ ಸರ್ಕಾರದ ವಿರುದ್ಧ ದಂಗೆ ಏಳುತ್ತೇವೆ. ಅದರ ಪರಿಣಾಮವನ್ನು ಮುಖ್ಯಮಂತ್ರಿಗಳಾದಿಯಾಗಿ ಕಾಂಗ್ರೆಸ್ ಸರಕಾರ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಲಗೈ ಸಮುದಾಯ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದೆ. ಸ್ವತಂತ್ರ ಬಂದಾಗಿನಿAದಲೂ ನನ್ನ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊAಡು ಬಂದಿದೆ.ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲು ಪ್ರಮುಖ ಪಾತ್ರ ವಹಿಸಿದೆ.ನಿಮಗೆ ನಿಜಕ್ಕೂ ದಲಿತಪರ ಕಾಳಜಿ ಇದ್ದಿದ್ದೇ ಆದಲ್ಲಿ ನಮಗೆ ಆಗಿರುವ ಅನ್ಯಾಯ ಸರಿಪಡಿಸಿ, ಎಲ್ಲಾ 101 ಜಾತಿಗಳಿಗೂ ಸಮಾನ ಅವಕಾಶ ಪ್ರಾತಿನಿಧ್ಯ ಕಲ್ಪಿಸಿ, ನಾಗಮೋಹನ್ ದಾಸ್ ಸಮಿತಿ ಬೇಕೆಂತಲೇ ನಮ್ಮ ಜನಸಂಖ್ಯೆಯನ್ನು ತಪ್ಪಾಗಿ ನಮೂದಿಸಿ ಚಾರಿತ್ರಿಕ ದ್ರೋಹವೆಸಗಿದೆ.
ಬಲಗೈ ಸಮುದಾಯವನ್ನು ಗ್ರೂಪ್ ಬಿ ಗೆ ಸೇರಿಸುವುದರ ಮೂಲಕ ಯಾವುದೇ ಉನ್ನತ ಹುದ್ದೆಗಳು ಹೊಲೆಯ/ಛಲವಾದಿ ಬಲಗೈ ಸಂಬಂಧಿತ ಜಾತಿಗಳಿಗೆ ಸಿಗದಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿರುತ್ತದೆ ಎಂದು ದೂರಿದ ಅವರು ನೀವು ದಲಿತ ಪರ ಮುಖ್ಯಮಂತ್ರಿ ಎನ್ನುವುದೇ ನಿಜವಾದಲ್ಲಿ ಅಸ್ಪೃಶ್ಯ ಸಮುದಾಯಗಳಾದ ಎಡ ಬಲಕ್ಕೆ ನ್ಯಾಯ ಕೊಡಿ. ಈ ವಿಚಾರದಲ್ಲಿ ಸರ್ಕಾರದ ಮೇಲೆ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ. ಇದಕ್ಕೆ ಚ್ಯುತಿ ಬಂದರೆ ಖಂಡನೆ ಖಚಿತ ಎಂದರು.
ಚಿಂತಾಮಣಿ ನಗರಸಭಾ ಸದಸ್ಯ ಇಒ ರೆಡ್ಡಪ್ಪ ಮಾತನಾಡಿ, ದಿನ ಬೆಳಗಾದರೆ ಮಾಧ್ಯಮ ಗಳಲ್ಲಿ ಎಡ ಬಲ ಚರ್ಚೆ ಕೇಳಿ ಸಾಕಾಗಿದೆ. ಬಲಗೈ ಸಮುದಾಯಕ್ಕೆ ನಾಗಮೋಹನ್ ದಾಸ್ ವರದಿಯಿಂದ ಅನ್ಯಾಯ ಆಗಿರುವ ಬಗ್ಗೆ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಎ.ಕೆ.ಎ.ಡಿ ಸಮಸ್ಯೆ ಬಗೆಹರಿಸಿಯೇ ಒಳಮೀಸಲಾತಿ ಜಾರಿ ಮಾಡಬೇಕಿತ್ತು. ಆದರೆ ಬಲಗೈ ಸಮುದಾಯ ಸ್ವಾತಂತ್ರ‍್ಯ ಬಂದಾಗಿನಿಂದಲೂ ಹೆಚ್ಚಿನ ಅವಕಾಶ ಪಡೆದಿದ್ದಾರೆ ಎಂದು ಹೇಳುವ ಮೂಲಕ ಸಮಿತಿ ಅಧ್ಯಕ್ಷ ನಾಗಮೋಹನ್ ದಾಸ್ ಪಕ್ಷಪಾತಿ ಆಗಿದ್ದಾರೆ.
ಪೂರ್ವಾಗ್ರಹ ಪೀಡಿತರಾಗಿ ಈ ವರದಿ ಸಿದ್ದಪಡಿಸಿರುವುದರಿಂದ ಇದನ್ನು ತಿರಸ್ಕರಿಸಬೇಕು. ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಡರಂತೆ ವರದಿ ಜಾರಿಗೆ ತಂದು ರಾಜ್ಯಪಾಲರ ಮೇಲೆ ಒತ್ತಡ ಹಾಕಿ ಅಂಕಿತ ಹಾಕಿಸಿದ್ದಾರೆ. ಹೀಗಾಗಿ, 27ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹೊಲೆಯ ಸಮುದಾಯಕ್ಕೆ ಆಗಿರುವ ಚಾರಿತ್ರಿಕ ಅನ್ಯಾಯ ಸರಿಪಡಿ ಸಲು ಮುಂದಾಗಬೇಕು ಇಲ್ಲವಾದಲ್ಲಿ ಸರಕಾರ ಪತನ ಖಚಿತ ಎಂದು ಎಚ್ಚರಿಕೆ ನೀಡಿದರು.
ಬಾಗೇಪಲ್ಲಿ ಟಿ.ರಾಮಪ್ಪ ಮಾತನಾಡಿ, 101 ಜಾತಿಗಳಲ್ಲಿ ಹೊಲೆಯ ಮಾದಿಗ ಸಮುದಾಯ ಮಾತ್ರ ಅಸ್ಪೃಶ್ಯ ಸಮುದಾಯ.ಇವರ ನಡುವೆ ಕಿಚ್ಚು ಹಚ್ಚುವ ಕೆಲಸ ಸರಕಾರದಿಂದ ಆಗಿದೆ.ಹೊಲೆಯ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಎಂದು ಆಗ್ರಹಿಸಿದರು.
ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ ಮಾ.25ರ ಹೋರಾಟಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗ ಬೇಕು. ಜಿಲ್ಲೆಯಲ್ಲಿ ನಮ್ಮ ಸಮುದಾಯ 1.25ಲಕ್ಷ ಜನ ಇದ್ದಾರೆ. ನಾಗಮೋಹನ್‌ದಾಸ್ ವರದಿಯಂತೆ, ಸಮಾಜ ಕಲ್ಯಾಣ ಇಲಾಖೆ ನೀಡಿದ ದಾಖಲೆಯಲ್ಲಿ 50 ಸಾವಿರ ಕೊಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ 220 ಮನೆ ಮಾತ್ರ ಛಲವಾದಿ ಇದ್ದಾರೆ ಎಂದು ತೋರಿಸಿದೆ ಇದು ಅವೈಜ್ಞಾನಿಕವಲ್ಲವೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸಂಘಟನಾ ಸಂಚಾಲಕ ಕೈವಾರ ಮಂಜುನಾಥ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮುನಿಆಂಜಿನಪ್ಪ, ಕರ್ನಾಟಕ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವಿ.ಕೃಷ್ಣಪ್ಪ, ಹಿರಿಯ ಮುಖಂಡ ನಿವೃತ್ತ ಇ.ಒ.ನಗರಸಭಾ ಸದಸ್ಯ ರೆಡ್ಡಪ್ಪ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಬಾಗೇ ಪಲ್ಲಿ ಟಿ.ರಾಮಪ್ಪ, ಹಿರಿಯ ಮುಖಂಡ ಜಿ.ಸಿ.ವೆಂಕಟೇಶ್, ಚೇಳೂರು ತಾಲೂಕು ಅಧ್ಯಕ್ಷ ದೇವರಾಜ್, ಗುಡಿಬಂಡೆ ಅಧ್ಯಕ್ಷ ಎಂ.ಸಿ.ನರಸಿAಹಯ್ಯ, ಗೌರಿಬಿದನೂರು ಕೌನ್ಸಿಲರ್ ಮುನಿರಾಜು ಮತ್ತಿತರರು.