ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಸಿಗ್ಬತುಲ್ಲಾ ಹಠಾವೋ, ಗುಡಿಬಂಡೆ ಬಚಾವೋ’: ತಹಸೀಲ್ದಾರ್ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎಸ್.ಸ್ವಾಮಿ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ನೇಮಕ ಗೊಂಡಿ ರುವ ಅಧಿಕಾರಿಗಳು ಜನರ ಅಹವಾಲುಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಆದರೆ ಗುಡಿಬಂಡೆ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಮನವಿಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಆಗ್ರಹಿಸಿದರು

ಸಾರ್ವಜನಿಕ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪ

ಚಿಕ್ಕಬಳ್ಳಾಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಅಹವಾಲು ಹಾಗೂ ಮನವಿ ಪತ್ರ ಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಗುಡಿಬಂಡೆ ತಾಲ್ಲೂಕಿನ ತಹಸೀಲ್ದಾರ್ ಸಿಗ್ಬತುಲ್ಲಾ ವಿರುದ್ಧ ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

‘ಸಿಗ್ಬತುಲ್ಲಾ ಹಠಾವೋ, ಗುಡಿಬಂಡೆ ಬಚಾವೋ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎಸ್.ಸ್ವಾಮಿ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ನೇಮಕ ಗೊಂಡಿರುವ ಅಧಿಕಾರಿಗಳು ಜನರ ಅಹವಾಲುಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಆದರೆ ಗುಡಿಬಂಡೆ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಮನವಿಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಜನರ ತೆರಿಗೆ ಹಣದಿಂದ ವೇತನ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Gudibande News: ಸಮಾವೇಶ ಯಶಸ್ವಿಗೆ ಕರೆ: ಗುಡಿಬಂಡೆಯಲ್ಲಿ ಪೂರ್ವಭಾವಿ ಸಭೆ

ಗುಡಿಬಂಡೆ ತಾಲ್ಲೂಕಿನ ಸರ್ಕಾರಿ ಜಮೀನುಗಳು, ಗುಂಡುತೋಪುಗಳು ಹಾಗೂ ಬಂಡಿದಾರಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕವಾಗಿ ಸಂರಕ್ಷಿಸಿ, ಬಳಕೆಗೆ ಮುಕ್ತಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಈ ಕುರಿತು ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಭಾವಿಗಳ ಒತ್ತಡಕ್ಕೆ ಮಣಿಯಬಾರದು

ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ಪರಿಶೀಲಿಸಿ ನ್ಯಾಯ ಒದಗಿಸುವ ಬದಲು ಕೆಲವು ಅರ್ಜಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರಭಾವಿಗಳು ಹಾಗೂ ಬಲಾಢ್ಯರ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ತಹಸೀಲ್ದಾರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.

ಜಿಲ್ಲಾಡಳಿತಕ್ಕೂ ಎಚ್ಚರಿಕೆ

ಸಂಘಟನೆಯ ರಾಜ್ಯ ಉಪಾಧ್ಯಕ್ಷ ನರಸಿಂಹಗೌಡ ಆರ್. ಮಾತನಾಡಿ, ಗುಡಿಬಂಡೆ ದಂಡಾಧಿಕಾರಿ ಗಳ ಕಾರ್ಯವೈಖರಿ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಮುಂದಿನ ದಿನಗಳಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ‘ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹಠಾವೋ, ಚಿಕ್ಕಬಳ್ಳಾಪುರ ಬಚಾವೋ’ ಎಂಬ ಘೋಷಣೆಯೊಂದಿಗೆ ಮತ್ತಷ್ಟು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಮೂರ್ತಿ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಆರೋಪವೇನು?

  • ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ
  • ಮನವಿ ಪತ್ರಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪ
  • ಸರ್ಕಾರಿ ಜಮೀನು, ಗುಂಡುತೋಪು, ಬಂಡಿದಾರಿ ಸಂರಕ್ಷಣೆಗೆ ಆಗ್ರಹ
  • ತಹಸೀಲ್ದಾರ್ ಅಮಾನತಿಗೆ ಒತ್ತಾಯ
  • ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ತೀವ್ರ ಹೋರಾಟದ ಎಚ್ಚರಿಕೆ