ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Special Revenue Village Campaign 2.0: ಫೆ.27ಕ್ಕೆ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ: 25 ಸಾವಿರ ದಾಖಲೆಗಳ ವಿತರಣೆ : ಜಿ.ಪ್ರಭು ಹೇಳಿಕೆ

ಚಿಕ್ಕಬಳ್ಳಾಪುರ ತಾಲೂಕು  ಚೊಕ್ಕಹಳ್ಳಿ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44ರ ಬಳಿ ನಿರ್ಮಿಸಿರುವ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದ ಬೃಹತ್ ವೇದಿಕೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಂದ ಕಂದಾಯ ಇಲಾಖೆಯಲ್ಲಿಯೇ ಐತಿಹಾಸಿಕ ವಾದ ಈ ಕಾರ್ಯಕ್ರಮ ನಡೆಯಲಿದೆ

ಚಿಕ್ಕಬಳ್ಳಾಪುರದಲ್ಲಿ ಫೆ.27ಕ್ಕೆ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ನಡೆಯಲಿದ್ದು 25 ಸಾವಿರ ದಾಖಲೆಗಳ ವಿತರಣೆಗೆ ಸಿದ್ದತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಹೇಳಿದರು.

ಚಿಕ್ಕಬಳ್ಳಾಪುರ: ಕಂದಾಯ ಗ್ರಾಮ ವಿಶೇಷ ಅಭಿಯಾನದಡಿ ಫೆ.27ರಂದು ನಗರದ ಹೊರವಲಯದ ಚೊಕ್ಕಹಳ್ಳಿ ಸಮೀಪ ನಡೆಯುವ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದ ಬೃಹತ್ ವೇದಿಕೆಯಲ್ಲಿ 25 ಸಾವಿರ ಕಂದಾಯದಾಖಲೆಗಳ ವಿತರಣೆ ಜತೆಗೆ ವಿಶೇಷ ಕಂದಾಯ ಗ್ರಾಮ ಅಭಿಯಾನ 2.0(Special Revenue Village Campaign 2.0)ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Dr.M.C.Sudhakar) ಚಾಲನೆ ನೀಡುವರು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.

ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕಂದಾಯ ಗ್ರಾಮ ವಿಶೇಷ ಅಭಿಯಾನದ ಕುರಿತು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಿಕ್ಕಬಳ್ಳಾಪುರ ತಾಲೂಕು  ಚೊಕ್ಕಹಳ್ಳಿ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44ರ ಬಳಿ ನಿರ್ಮಿಸಿರುವ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದ ಬೃಹತ್ ವೇದಿಕೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಂದ ಕಂದಾಯ ಇಲಾಖೆಯಲ್ಲಿಯೇ ಐತಿಹಾಸಿಕವಾದ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಇದನ್ನೂ ಓದಿ: Dr. M.C. Sudhakar: 2027ರ ಹೊತ್ತಿಗೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ : ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್

2036 ದಾಖಲೆ ರಹಿತ ಜನ ವಸತಿಗಳ ನಿವಾಸಿ ಫಲಾನುಭವಿಗಳಿಗೆ ಮಾಲೀಕತ್ವದ ಹಕ್ಕುಪತ್ರ ಗಳನ್ನು ಜಿಲ್ಲಾಡಳಿತ ವತಿಯಿಂದ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ 51,941 ಫಲಾನು ಭವಿಗಳಿಗೆ ಹಕ್ಕುಪತ್ರಗಳನ್ನು ಜಿಲ್ಲೆಯಲ್ಲಿ ವಿತರಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಸುಮಾರು 3 ಸಾವಿರ ದರಖಾಸ್ತು ಪೋಡಿ, 2 ಸಾವಿರ, ಕಂದಾಯ ಗ್ರಾಮಗಳ ಹಕ್ಕುಪತ್ರ, 16500 ಫೌತಿ ಖಾತೆ, ಹಾಗೂ 3500 ಸಾಮಾಜಿಕ ಭದ್ರತಾ ಯೋಜನೆಯ ಆದೇಶಪತ್ರ ಒಟ್ಟು 25 ಸಾವಿರ ಕಂದಾಯ ಸೇವೆಗಳ ದಾಖಲೆ ವಿತರಣೆ ನಡೆಯಲಿದೆ ಎಂದರು.

ಈ ಅಭಿಯಾನದಡಿ ದಾಖಲೆ ರಹಿತ ಜನ ವಸತಿಗಳ ನಿವಾಸಿಗಳನ್ನು ಗುರುತಿಸುವಿಕೆ ಕಾರ್ಯ ಈ ತಿಂಗಳ ಆರಂಭದಿಂದ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಜಿಲ್ಲೆಯ ಪ್ರತಿ ದಾಖಲೆ ರಹಿತ ಜನ ವಸತಿ ನಿವಾಸಿಗಳ ಮಾಹಿತಿಯನ್ನು ಕರಾರುವಕ್ಕಾಗಿ ಕಲೆ ಹಾಕುವ ಜೊತೆಗೆ ಹಕ್ಕು ಪತ್ರ ವಿತರಣೆಯ ಐತಿಹಾಸಿಕ ಹಾಗೂ ಮೌಲ್ಯಯುತ ಕಾರ್ಯಕ್ರಮಕ್ಕೆ ಜಿಲ್ಲೆ ಸಾಕ್ಷಿಯಾಗುತ್ತಿರುವುದು ಬಹಳ ಸಂತಸದ ವಿಚಾರವಾಗಿದೆ ಎಂದರು.

cbpm10o

ಇಂತಹ ಐತಿಹಾಸಿಕ ಮಹೋನ್ನತ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ  ಸಚಿವರು, ಮಾನ್ಯ ಕಂದಾಯ ಸಚಿವರ ಸಹಕಾರ ಹಾಗೂ ಮಾರ್ಗ ದರ್ಶನ ಮುಖ್ಯ ಪ್ರೇರಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರುಗಳು, ಮಾನ್ಯ ಸಂಸದರುಗಳು, ಮಾನ್ಯ ಶಾಸಕರುಗಳು, ನಿಗಮ ಮಂಡಳಿಗಳ ಜನ ಪ್ರತಿನಿಧಿಗಳು, ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಆದ್ದರಿಂದ ಈ ಯೋಜನೆಗಳಡಿ ಫಲಾನುಭವ ಹೊಂದಿರುವ ಕುಟುಂಬದವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಹೊಂದುವಂತೆ ಜಿಲ್ಲಾಧಿಕಾರಿ ಗಳು ಆಹ್ವಾನ ನೀಡಿದರು.

ಸ್ವಾತಂತ್ರ‍್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ. ಆ ಹಿನ್ನೆಲೆಯಲ್ಲಿ ಸರ್ಕಾರ “ಕಂದಾಯ ಗ್ರಾಮ ಅಭಿಯಾನ”ವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅಭಿಯಾನ ವನ್ನು ಕರಾರುವಕ್ಕಾಗಿ  ಮಾಡಲಾಗುತ್ತಿದೆ.

ಕನಿಷ್ಠ 10 ಮನೆಗಳ ವಾಸವಿರುವ ದಾಖಲೆ ರಹಿತ ಜನವಸತಿಯ ಬಹುತೇಕ ಎಲ್ಲ ಪ್ರದೇಶ ಗಳನ್ನು  ಗುರ್ತಿಸಲಾಗಿದೆ. ದರಖಾಸ್ತು ಪೋಡಿ, ಇ ಪೌತಿ ಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರಗಳು ಸೇರಿದಂತೆ ಕಂದಾಯ ಇಲಾಖೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ಕಂದಾಯ ಸಚಿವರ ಅಮೃತ ಹಸ್ತದಿಂದ ವಿತರಣೆ ಮಾಡಲು ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ,

ಈ ಕಾರ್ಯ ಅನುಷ್ಠಾನಕ್ಕೆ ಹೆಚ್ಚು ಶ್ರಮಿಸಿದ ಜಿಲ್ಲೆಯ 30 ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ಗೌರವಿಸುವಂತಹ ಕಾರ್ಯ ಕೂಡ ನಡೆಯಲಿದೆ. ಸದರಿ  ಸಿಬ್ಬಂದಿಯು ಪ್ರತಿ ಮನೆಮನೆಗೆ ಭೇಟಿ ಕೊಟ್ಟು ಈ ಎಲ್ಲ ಅಭಿಯಾನಗಳ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ತಾಲ್ಲೂಕು ಕಚೇರಿಗಳಲ್ಲಿ 1.9 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಈಗಾಗಲೇ ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಮುಂದಿನ 45 ದಿನಗಳ ಒಳಗಾಗಿ ಬಾಕಿ ಉಳಿದಿರುವ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಆನ್ ಲೈನ್ ನಲ್ಲಿಯೇ ದಾಖಲೆಗಳನ್ನು ಜನರು ಹಣ ಪಾವತಿಸಿ ಪಡೆದುಕೊಳ್ಳೂವಂತಹ ವ್ಯವಸ್ಥೆ ತ್ವರಿತವಾಗಿ ಆಗುತ್ತಿದೆ. ಅಕ್ರಮ ಭೂ ಮಂಜೂರಾತಿ ಮಾಡಿಕೊಂಡಿರುವ ಪ್ರಕರಣಗಳ ಬಗ್ಗೆ  ಪರಿಶೀಲಿಸಿ ಮುಂದಿನ ದಿನಗಳಲ್ಲಿ  ನೈಜ ಮಾಲೀಕತ್ವದ ಬಗ್ಗೆ ಖಾತ್ರಿ ಮಾಡಲಾಗುವುದು. ಜಿಲ್ಲಾಡಳಿತದ ಎಲ್ಲ ಇಲಾಖೆಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಇ-ಆಫೀಸ್   ತಂತ್ರಾAಶದ ಮೂಲಕ ವಿಲೇವಾರಿ ಮಾಡುವ ಕಾರ್ಯ ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಮೂಲಕ ಪಾರದರ್ಶಕ ಹಾಗೂ ಜನ ಸ್ನೇಹಿ ಆಡಳಿತವನ್ನು ನೀಡಲು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿಸಿದರು.

ಫಲಾನುಭವಿಗಳ ಪ್ರತಿಕ್ರಿಯೆಗಳು: ಕಂದಾಯ ಗ್ರಾಮ ವಿಶೇಷ ಅಭಿಯಾನದಡಿ ಹಕ್ಕು ಪತ್ರ ಪಡೆದ ಮಂಚನಬಲೆ ಮಂಜುನಾಥ್ ಅವರು ಮಾತನಾಡಿ, ದಾಖಲೆ ರಹಿತವಾಗಿ ಕಳೆದ 40 ವರ್ಷಗಳಿಂದ ವಾಸವಿದ್ದ ನಮ್ಮ ಮನೆಗೆ ಇಂದು ಅಧಿಕೃತ ಮಾಲೀಕತ್ವದ ದಾಖಲೆ ನೀಡುತ್ತಿರುವ ಜಿಲ್ಲಾಡಳಿತ ಕ್ರಮ ಬಹಳ ಜನಸ್ನೇಹಿಯಾಗಿದೆ. ನಮ್ಮಂತಹ 150 ಕುಟುಂಬಗಳಿಗೆ ನನ್ನ ಗ್ರಾಮದಲ್ಲಿ ಅನುಕೂಲವಾಗಿದೆ. ಇಂತಹ ಜೀವಮಾನ ಸಾಧನೆಯ ಕಾರ್ಯಕ್ಕೆ ಕಾರಣೀಭೂತರಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಂದಾಯ ಸಚಿವರು ಮತ್ತು ಆಡಳಿತ ವರ್ಗದವರ ಕಾರ್ಯ ಸ್ಮರಣೀಯವಾದದ್ದು ಎಂದು ಹರ್ಷ ವ್ಯಕ್ತಪಡಿಸಿದರು.

ಮತ್ತೋರ್ವ ಫಲಾನುಭವಿ ಅಡವಿಗೊಲ್ಲವಾರಹಳ್ಳಿ ನರಸಿಂಹಪ್ಪ ಅವರು ಮಾತನಾಡಿ, ಇಂತಹ ಕಾರ್ಯಕ್ಕೆ ಹಿಂದೆAದು ಯಾರೋಬ್ಬರೂ ಪ್ರಯತ್ನ ಮಾಡಿರುವುದಿಲ್ಲ. ನಮ್ಮ ಮನೆ ಬಾಗಿಲಿಗೆ ಆಡಳಿತ ವರ್ಗದವರು ಬಂದು ಒಂದು ನಯಾ ಪೈಸೆ ಹಣ ಪಡೆಯದೆ ಅತ್ಯಂತ ಪಾರದರ್ಶಕವಾಗಿ ಹಾಗೂ ಭ್ರಷ್ಟಾಚಾರ ರಹಿತವಾಗಿ ಹಕ್ಕುಪತ್ರಗಳನ್ನು ನೀಡಿರುವುದು ಸಂತಸ ತಂದಿದೆ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿ ಸೊಣ್ಣೇನಹಳ್ಳಿಯ ಎಸ್.ಎಂ.ಮುನಿ ವೆಂಕಟಪ್ಪ ಮಾತನಾಡಿ, 60 ವರ್ಷ ತುಂಬಿದ ನನಗೆ ಪಿಂಚಣಿಯ  ಬಗ್ಗೆ ಅರಿವು ಮೂಡಿ ಸುವ ಜೊತೆಗೆ ಸರ್ಕಾರದ ವೃದ್ದಾಪ್ಯ ಮಾಶಾಸನದ ಮಂಜೂರಾತಿ ಪತ್ರ ನೀಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಫೌತಿ ಖಾತೆ ಆಂದೋಲನದ ಫಲಾನುಭವಿ ತಿಪ್ಪೇನಹಳ್ಳಿಯ ವೆಂಕಟರಾಮಯ್ಯ ಮಾತನಾಡಿ, ಕಳೆದ 15 ವರ್ಷಗಳಿಂದ ನಮ್ಮ ಜಮೀನಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪರಿಶ್ರಮ ದಿಂದ ಜಿಲ್ಲಾಡಳಿತ ಪ್ರಸ್ತುತ ಕೈಗೊಂಡಿರುವ ಅಭಿಯಾನದಲ್ಲಿ ಯಾವುದೇ ಖರ್ಚಿಲ್ಲದೆ 6 ಎಕರೆ ಜಮೀನಿಗೆ ಪೌತಿ ಖಾತಿ ಪಹಣಿ ನಮ್ಮ ಕುಟುಂಬಕ್ಕೆ ದೊರಕಿದೆ ಎಂದು ತಿಳಿಸಿದರು.

ದರ್ಖಾಸ್ತು ಪೋಡಿ ಫಲಾನುಭವಿ ಮುದ್ದೇನಹಳ್ಳಿಯ ನಾರಾಯಣಸ್ವಾಮಿ ಅವರು ಮಾತನಾಡಿ, ಹಲವು ದಶಕಗಳಿಂದ ಪೈಕಿ ನಂಬರ್ ಪಹಣಿ ಹೊಂದಿದ್ದ ನಮ್ಮ ಜಮೀನಿಗೆ ದಾಖಲೆ ತಿದ್ದುಪಡಿ ಆಗಿರಲಿಲ್ಲ. ಪ್ರಸ್ತುತ ಈ ಅಭಿಯಾನದಡಿ 2.36 ಎಕರೆ ಜಮೀನಿಗೆ ದರ್ಖಾಸ್ತು ಪೋಡಿ ಮಾಡಿ ಕೊಡುವ ಮೂಲಕ ನಮ್ಮ ಜಮೀನಿಗೆ ಅಧಿಕೃತ ದಾಖಲೆ ದೊರಕಿದೆ. ಇದರಿಂದ ಸಾಲ ಸೌಲಭ್ಯ ಪಡೆಯಲು ಹಾಗೂ ಸರ್ಕಾರದ ಇತರ ಸೌವಲತ್ತನ್ನು ಪಡೆಯಲು ಬಹಳ ಅನುಕೂಲಕಾರಿಯಾಗಿದೆ ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ತಹಸೀಲ್ದಾರ್ ರಶ್ಮಿ, ಗಗನ ಸಿಂಧೂ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ ಹಾಜರಿದ್ದರು.