ಸತ್ಯ ಸಾಯಿ ಗ್ರಾಮದ ಹೊಸ ಆಸ್ಪತ್ರೆಯಲ್ಲಿ ಶೀಘ್ರ ಫರ್ಟಿಲಿಟಿ ಕೇಂದ್ರ ಆರಂಭ: ಸದ್ಗುರು ಶ್ರೀ ಮಧುಸೂದನ ಸಾಯಿ
Sadguru Sri Madhusudan Sai: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ಫಲವತ್ತತೆ ಕೊರತೆ ನಿವಾರಿಸುವ 'ಫರ್ಟಿಲಿಟಿ ಲ್ಯಾಬ್' ಆರಂಭಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.

-

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ಫಲವತ್ತತೆ ಕೊರತೆ ನಿವಾರಿಸುವ 'ಫರ್ಟಿಲಿಟಿ ಲ್ಯಾಬ್' ಆರಂಭಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಮಹತ್ವದ ಘೋಷಣೆ ಮಾಡಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ' ದ 63ನೇ ದಿನವಾದ ಶುಕ್ರವಾರ ಸದ್ಗುರುಗಳು ಆಶೀರ್ವಚನ ನೀಡಿದರು.
ಫಲವತ್ತತೆ ಕೊರತೆ ನಿವಾರಿಸುವ ಚಿಕಿತ್ಸೆಗೆ ಸಂಬಂಧಿಸಿದ ಪ್ರಯೋಗಾಲಯ ನಮ್ಮಲ್ಲಿ ಇರಲಿಲ್ಲ. ಹೀಗಾಗಿ ಅಂಥವರನ್ನು ಬೆಂಗಳೂರಿಗೆ ಕಳುಹಿಸಬೇಕಾಗಿತ್ತು. ಒಂದು ಬಾರಿ ಚಿಕಿತ್ಸೆ ಪಡೆಯಲು 2 ರಿಂದ 4 ಲಕ್ಷ ವೆಚ್ಚವಾಗುತ್ತಿತ್ತು. ಇದು ಬಡವರ ಕೈಗೆಟುಕುವಂತಿರಲಿಲ್ಲ. ಹೀಗಾಗಿ ಹೊಸದಾಗಿ ಪ್ರಾರಂಭವಾಗುತ್ತಿರುವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ 'ಫರ್ಟಿಲಿಟಿ ಲ್ಯಾಬ್' ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.
ಮಕ್ಕಳಾಗದವರನ್ನು ಸಮಾಜವು ಕಳಂಕ ಎನ್ನುವಂತೆ ನೋಡುತ್ತದೆ. ಸಾಮಾಜಿಕ ಒತ್ತಡಗಳಿಂದ ಇಂಥ ಕುಟುಂಬಗಳು ಹೈರಾಣಾಗುತ್ತವೆ. ಮಗು ಹೆರದ ಹೆಂಡತಿಯನ್ನು ತ್ಯಜಿಸುವ ಪುರುಷರು ಮತ್ತೊಂದು ಮದುವೆಯಾಗಿರುವ ಹಲವು ಉದಾಹರಣೆಗಳಿವೆ. ಸಮಾಜವು ಇಂಥ ಮಹಿಳೆಯರನ್ನು ಶಾಪ ಅಥವಾ ಅನಿಷ್ಟ ಎಂದು ಹೀಗಳೆಯುತ್ತದೆ. ಇಂಥ ಸಂದರ್ಭದಲ್ಲಿ ಮಹಿಳೆಯರು ಹಲವು ವಿಧದ ಮಾನಸಿಕ ಒತ್ತಡಗಳಿಗೆ ತುತ್ತಾಗುತ್ತಾರೆ ಎಂದು ವಿಷಾದಿಸಿದರು.
ವಿವಿಧ ಸಮಸ್ಯೆಗಳಿಂದಾಗಿ ಗರ್ಭ ಧರಿಸಲು ತೊಂದರೆ ಅನುಭವಿಸುತ್ತಿದ್ದ ಸುಮಾರು 60 ಮಹಿಳೆಯರಿಗೆ ನಮ್ಮ ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಯು ಯಶಸ್ವಿಯಾಗಿದೆ. ಮಹಿಳೆಯು ತಾಯಿಯಾಗುವುದು ಎಂದರೆ ಆಕೆಯ ಘನತೆಯನ್ನು ಮರು ಸ್ಥಾಪಿಸಿದಂತೆ. ಮಗು ಎನ್ನುವುದು ದೇವರು ನೀಡುವ ಸುಂದರ ಕೊಡುಗೆ. ಇದು ದೇವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ' ಗೆ ಬೆಂಬಲ ನೀಡುತ್ತಿರುವ 'ಫನೂಕ್ ಇಂಡಿಯಾ' ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಕಾರ್ಯಾಚರಣೆಗಳ ವಿಭಾಗದ ಉಪಾಧ್ಯಕ್ಷ ಕೆ.ಜಿ. ಹರಿಹರನ್ ಪಿಳೈ ಮತ್ತು ಕಾರ್ಯದರ್ಶಿ ಮನೀಶಾ ಅಗರ್ವಾಲ್ ಪ್ರಶಸ್ತಿ ಸ್ವೀಕರಿಸಿದರು.
'ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್‌ಶಿಪ್ ಕಾರ್ಯಕ್ರಮ' ಕ್ಕೆ ಬೆಂಬಲ ನೀಡುತ್ತಿರುವ ವೋಕ್ಸ್‌ವ್ಯಾಗನ್ (Volkswagen) ಸಮೂಹದ 'ಎಂಬಿಟೆಲ್ ಟೆಕ್ನಾಲಜೀಸ್ ಇಂಡಿಯಾ' ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ವೋಕ್ಸ್‌ವ್ಯಾಗನ್ ಸಮೂಹದ ಪ್ರತಿನಿಧಿಗಳಾದ ಪ್ರತಾಪ್ ಸಿಂಹ ಮತ್ತು ಜಯಂತ್ ತೆವಾರಿ ಪ್ರಶಸ್ತಿ ಸ್ವೀಕರಿಸಿದರು.
ಐರ್‌ಲೆಂಡ್ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಜಾರ್ಜ್ ಡೇವಿಡ್ ಸ್ಮುಲ್ಲೆನ್ (George David Smullen) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಐರ್‌ಲೆಂಡ್ ಪ್ರತಿನಿಧಿ ಆಂಡ್ರ್ಯೂ ಗಾರ್ಡನ್ (Andrew Gordon) ತಮ್ಮ ದೇಶದ ಜನಸಂಖ್ಯೆ, ವಾತಾವರಣ, ಭಾಷೆ, ಕರೆನ್ಸಿ, ಪ್ರಖ್ಯಾತ ಸ್ಥಳಗಳು, ಪ್ರವಾಸಿ ತಾಣಗಳು, ಕಲೆ, ಸಂಗೀತ, ಸಂಸ್ಕೃತಿ, ಆಹಾರ, ಸಾಂಪ್ರದಾಯಿಕ ಉಡುಪು, ಆಧ್ಯಾತ್ಮ, ಆತಿಥ್ಯ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡರು.
ಈ ಸುದ್ದಿಯನ್ನೂ ಓದಿ | Sri Madhusudan Sai: ಸೇವಾಸಂಸ್ಥೆಗಳಿಗೆ ಸಿಗುವ ದೇಣಿಗೆಗಳಿಗೆ ತೆರಿಗೆ ವಿನಾಯ್ತಿ ಇರಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ
ಬಡವರ ಕೈಗೆಟುಕದ ದುಬಾರಿ ಚಿಕಿತ್ಸೆ
ಫರ್ಟಿಲಿಟಿ ಚಿಕಿತ್ಸೆಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ದುಬಾರಿ ಶುಲ್ಕ ಇದೆ. ಇದು ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯ. ಒಂದೇ ಬಾರಿಗೆ ಯಶಸ್ವಿಯಾಗುತ್ತದೆ ಎಂದು ಹೇಳಲೂ ಸಾಧ್ಯವಿಲ್ಲ. ವಿಮಾ ಯೋಜನೆಗಳಲ್ಲಿ ಸೇರಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಥ ಸೇವೆಗಳು ಸಿಗುತ್ತಿಲ್ಲ. ಹೀಗಾಗಿ ಇದು ಬಡವರ ಕೈಗೆಟುಕದ ದುಬಾರಿ ಚಿಕಿತ್ಸೆ ಎನಿಸಿಕೊಂಡಿದೆ. ನಮ್ಮ ನೂತನ ಆಸ್ಪತ್ರೆಯಲ್ಲಿ ಆರಂಭವಾಗಲಿರುವ 'ಫರ್ಟಿಲಿಟಿ ಲ್ಯಾಬ್' ನಲ್ಲಿ ಭಾರತೀಯರು ಮಾತ್ರವಲ್ಲದೆ ವಿದೇಶಗಳಿಂದ ಬರುವವರಿಗೂ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.