ಚಿಕ್ಕಬಳ್ಳಾಪುರ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನಡೆಸುತ್ತಿರುವ ನಿಸ್ವಾರ್ಥ ಸೇವೆ ದೇಶಕ್ಕೇ ಮಾದರಿಯಾಗಿದ್ದು, ಮೌಲ್ಯಾಧಾರಿತ ಶಿಕ್ಷಣದ ಮೂಲಕ ಉತ್ತಮ ಸಮಾಜ ನಿರ್ಮಾಣದ ಅವರ ಸಂಕಲ್ಪ ವಿಶ್ವಕ್ಕೆ ಪ್ರೇರಣೆಯಾಗಿದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ(Chhattisgarh Chief Minister Vishnu Dev Sai) ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಭವನದಲ್ಲಿ ಶುಕ್ರವಾರ ನಡೆದ 'ಶೈಕ್ಷಣಿಕ ಮೌಲ್ಯಗಳು' ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆ ದಾಳಿ; 200 ಲೀಟರ್‌ಗೂ ಅಧಿಕ ರಾಸಾಯನಿಕ, ನಕಲಿ ಲೇಬಲ್‌ಗಳು ವಶ
ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಪ್ರೀತಿ, ಕರುಣೆ ಮತ್ತು ಸೇವೆಯ ಪರಂಪರೆಯನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಅತ್ಯಂತ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಭಾರತೀಯ ಗುರು-ಶಿಷ್ಯ ಪರಂಪರೆಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸುವ ಮಹತ್ತರ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೌಲ್ಯಾಧಾರಿತ ಶಿಕ್ಷಣವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಉದ್ದೇಶದಿಂದ ಇಂತಹ ಅಂತಾ ರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದ ಅವರು ತಮ್ಮ ತವರು ರಾಜ್ಯ ಛತ್ತೀಸ್‌ಗಢ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸದ್ಗುರುಗಳು ಕೈಗೊಂಡಿರುವ ಸೇವಾ ಯೋಜನೆಗಳು ಸಮಾಜಮುಖಿ ಅಭಿವೃದ್ಧಿಗೆ ಮಾದರಿಯಾಗಿವೆ ಎಂದು ಹೇಳಿದರು.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು, ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದರ ಜೊತೆಗೆ ಛತ್ತೀಸ್ ಗಢದಲ್ಲಿ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜು ಆರಂಭಿಸಿ ಸಾವಿರಾರು ಯುವಕರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಸದ್ಗುರುಗಳು ತೊಡಗಿದ್ದಾರೆ.
ಜು.26ರಂದು ಜನ್ಮದಿನ ಆಚರಿಸಿಕೊಳ್ಳಲಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ಛತ್ತೀಸ್‌ಗಢದ ಮೂರು ಕೋಟಿ ಜನರ ಪರವಾಗಿ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.