ಚಿಕ್ಕಬಳ್ಳಾಪುರ: ನವರಾತ್ರಿಯಲ್ಲಿಯೇ ಅತ್ಯಂತ ಪವಿತ್ರ ಎಂದು ಪರಿಗಣಿಸಿರುವ ಅಷ್ಟಮಿ-ನವಮಿಯ ಸಂಧಿಕಾಲವಿದ್ದ ಮಂಗಳವಾರ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಹಲವು ಧಾರ್ಮಿಕ ವಿಧಿಗಳು ನೆರವೇರಿದವು. 'ಸಿದ್ಧಿಧಾತ್ರಿ' ರೂಪದ ದುರ್ಗಾದೇವಿಗೆ 'ಸಂಧಿ ಪೂಜೆ'ಯ ಪ್ರಯುಕ್ತ 108 ಕಮಲದ ಹೂ ಸಮರ್ಪಿಸಲಾಯಿತು. 108 ದೀಪಗಳನ್ನು ಹೊತ್ತಿಸಿ ನಮಿಸಲಾಯಿತು.
ಶಿವಪಂಚಾಕ್ಷರಿ ಹೋಮ, ಸಪ್ತದ್ರವ್ಯ ಮೃತ್ಯುಂಜಯ ಹೋಮಗಳು ಸಾಂಗವಾಗಿ ನೆರವೇರಿದವು. 'ಏಕಲಿಂಗತೋ ಭದ್ರಮಂಡಲ' ದ ರಂಗೋಲಿಯಲ್ಲಿ ಶಿವ-ಪಾರ್ವತಿಯರು ವಿರಾಜಿಸಿದರು. ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಮೃತ್ಯುಂಜಯ ಹೋಮಕ್ಕೆ ತನ್ನದೇ ಆದ ಮಹತ್ವವಿದೆ. ಇದು ಅಕಾಲಮೃತ್ಯು, ದೀರ್ಘಾಯುಸ್ಸು ಮತ್ತು ಕೆಟ್ಟ ವಿಚಾರಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ ಎಂದು ಆಸ್ತಿಕರು ನಂಬುತ್ತಾರೆ.
ನವರಾತ್ರಿ ಅಂಗವಾಗಿ ನಿರ್ಮಿಸಿರುವ ವಿಶೇಷ ಪೆಂಡಾಲ್‌ಗಳಲ್ಲಿ ದುರ್ಗಾ ಪೂಜೆಯ ಅಂಗವಾಗಿ ಕುಮಾರಿ ಪೂಜೆ ನಡೆಯಿತು. ಪುಟ್ಟ ಹೆಣ್ಣು ಮಕ್ಕಳನ್ನು ದೇವಿಯ ಮುಗ್ಧತೆ ಮತ್ತು ಪಾವಿತ್ರತ್ಯದ ಪ್ರತೀಕವಾಗಿ ಪೂಜಿಸಲಾಯಿತು. ಅಷ್ಟಾವಧಾನ, ಚತುರ್ವೇದ, ಸಂಗೀತ, ನಾದಸ್ವರ, ಪಂಚವಾದ್ಯಗಳೊಂದಿಗೆ ಅತಿರುದ್ರ ಮಹಾಯಜ್ಞವು ಸಂಪನ್ನವಾಯಿತು.
ಪ್ರತಿಷ್ಠಾಪನೆ ವಿಧಿಗಳು ನೆರವೇರುತ್ತಿರುವ ಉಮಾ ಮಹೇಶ್ವರ ದೇಗುಲದಲ್ಲಿ ಮೂಲ ವಿಗ್ರಹಗಳಿಗೆ ಫಲಾದಿವಾಸ ಪೂಜೆ ನಡೆಯಿತು. ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯಿತು. ಚಂಡಿ ಮತ್ತು ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಿತು. ದೇಗುಲದಲ್ಲಿ ಮಾತನಾಡಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, 'ಗಾಯತ್ರಿಯು ಎಲ್ಲ ವೇದಗಳ ತಾಯಿ. ವೇದ ಗುರುಕುಲಂನಲ್ಲಿ ಗಾಯತ್ರಿಯ ಸನ್ನಿಧಾನವಿದೆ. ಈ ದೇಗುಲವು ದೈವಸಂಕಲ್ಪವಾಗಿದೆ. ಇದು ಸಾವಿರಾರು ವರ್ಷ ಅಸ್ತಿತ್ವದಲ್ಲಿರುತ್ತದೆ' ಎಂದು ಹೇಳಿದರು.
ಸಾವನ್ನು ಅರ್ಥ ಮಾಡಿಕೊಂಡರೆ ಭಯ ದೂರ
'ಮೃತ್ಯುಂಜಯ ಮಂತ್ರದ ಮನನದಿಂದ ನಮಗೆ ಸಾವು ಇಲ್ಲದಂತೆ ಆಗುವುದಿಲ್ಲ. ಆದರೆ ಯಥಾರ್ಥ ಜ್ಞಾನದಿಂದ ಸಾವಿನ ಭಯ ದೂರವಾಗುತ್ತದೆ. ಶಿವನು ಮೋಕ್ಷ ಕೊಡುತ್ತಾನೆ. ಸಾವು ಎನ್ನುವುದು ಕೇವಲ ರೂಪಾಂತರ ಮಾತ್ರ. ಅಜ್ಞಾನಿಯು ಸಾವಿನಿಂದ ಸಾವಿಗೆ ಸಂಚರಿಸುತ್ತಾನೆ. ಜ್ಞಾನಿಯು ಜನ್ಮದಿಂದ ಜನ್ಮಕ್ಕೆ ಸಂಚರಿಸುತ್ತಾನೆ' ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಮ್ಮ ಆಶೀರ್ವಚನದಲ್ಲಿ ನುಡಿದರು.
'ಭಗವಂತನಲ್ಲಿ ಮನಸ್ಸಿಟ್ಟವರೇ ಭಾರತೀಯರು' ಎನ್ನುವ ಭಗವಾನ್ ಸತ್ಯ ಸಾಯಿ ಬಾಬಾ ಅವರ ಮಾತನ್ನು ನೆನಪಿಸಿದ ಅವರು, 'ಭಾರತದ ನಿಜವಾದ ಅರ್ಥವೇನು ಎನ್ನುವುದನ್ನು ಎಲ್ಲರೂ ಮನಗಾಣಬೇಕಾಗಿದೆ. ವೇದಗಳು ಮತ್ತು ಶ್ರೀ ಲಲಿತಾ ಸಹಸ್ರನಾಮ ನಮ್ಮನ್ನು ಒಂದೇ ತಾಯಿ-ತಂದೆಯ ಮಕ್ಕಳು ಎನ್ನುತ್ತಿವೆ. ಹೀಗಿರುವಾಗ ನಮ್ಮಲ್ಲಿ ಜಾತಿ-ಧರ್ಮಗಳ ಭೇದವೇಕೆ? ರಾಜಕಾರಣಕ್ಕಾಗಿ ಆರಂಭವಾದ ಈ ಒಡಕು ಇನ್ನಾದರೂ ಕೊನೆಯಾಗಬೇಕು' ಎಂದು ಆಶಯ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ | Navaratri 2025: ನವರಾತ್ರಿಯ ಒಂಬತ್ತನೇ ದಿನ; ಸಿದ್ದಿಧಾತ್ರಿ ದೇವಿಯನ್ನು ಪೂಜಿಸುವುದು ಏಕೆ?
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಸಿಎಸ್‌ಆರ್ ಸ್ಟ್ರಾಟಜಿಸ್ಟ್ ಅಪರ್ಣಾ ಪಾಂಡೆ ಮತ್ತು ಪ್ಯಾಲೇಸ್ ಆಫ್ ಎಕ್ಸ್ಟ್ರಾಡಿನರಿ ಫೌಂಡೇಷನ್ (PoEM) ಪ್ರತಿಷ್ಠಾನದ ಪ್ರತಿನಿಧಿ ಮೀನು ಮಾರಿಯಲ್ ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ಪಡೆದರು. ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ, ಸಂಗೀತ ವಿದ್ವಾನ್ ಪುರಸ್ಕೃತ ಪಂಡಿತ್ ಕೆ. ವೆಂಕಟೇಶ್ ಕುಮಾರ್ ಅವರು ನಡೆಸಿಕೊಟ್ಟ ಸಂಗೀತ ಕಛೇರಿಯು ಸಭಿಕರನ್ನು ಭಾವಪರವಶಗೊಳಿಸಿತು.