ಬಾಗೇಪಲ್ಲಿ: ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿದ್ಯಾರ್ಥಿಗಳು ಧಾನ್ಯಗಳ ರಾಶಿ ಪೂಜೆ, ಗೋ ಪೂಜೆ, ರಂಗೋಲಿ, ಎಳ್ಳು ಬೆಲ್ಲ ಹಂಚಿಕೆ, ಸಾಂಪ್ರದಾಯಿಕ ಉಡುಪು, ಕುಣಿತದೊಂದಿಗೆ ಸಂಭ್ರಮಿಸಿದರು.
ಪಟ್ಟಣದ ಪ್ರತಿಷ್ಠೆ ಶಾಲೆಯಾದ ಶಾಂತಿನಿಕೇತನ ಶಾಲೆಯಲ್ಲಿ ಭತ್ತ, ರಾಗಿ, ಸೇರಿದಂತೆ ನವ ಧಾನ್ಯ ಗಳ ರಾಶಿಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಸಂಭ್ರಮ ಆಚರಿಸಲಾಯಿತು.
ಶಾಲಾವರಣದಲ್ಲಿ ಗುಡಿಸಲು ನಿರ್ಮಿಸಿ ಅದರ ಮುಂದೆ ವಿದ್ಯಾರ್ಥಿಗಳು ಮನೆಗಳಿಂದ ತಂದಿದ್ದ ನವ ಧಾನ್ಯಗಳನ್ನು ರಾಶಿ ಹಾಕಿ, ಹಿರಿಯರು ಸಮಯ ಕಳೆಯಲು ಆಟವಾಡಲು ಬಳಸುತ್ತಿದ್ದ ಹಳ್ಳು ಮನೆ ಗುಳಿ, ಕಬ್ಬಿನ ಜಲ್ಲೆಗಳು, ಮಡಿಕೆ, ಕುಡಿಕೆಗಳು, ಗೆಡ್ಡೆ-ಗೆಣಸುಗಳನ್ನು ಇಟ್ಟು, ಎತ್ತುಗಳ ಪೂಜೆಗೆ ಅಣಿಗೊಳಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ನವೀನ್ ಕುಮಾರ್, ಡಿ.ಎನ್.ರಘುನಾಥ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅದ್ಯಕ್ಷ ಆರ್.ಹನುಮಂತ ರೆಡ್ಡಿ ಶಿವಪ್ಪ ಹಾಗೂ ಶಿಕ್ಷಕರೊಡನೆ ನವಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸಿದರು.
ಮುಖ್ಯ ಶಿಕ್ಷಕ ನವೀನ್ ಕುಮಾರ್ ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ಶತಮಾನಗಳಿಗಿಂತ ಹಿಂದಿ ನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಚಳಿಗಾಲದಲ್ಲಿ ರಾಸುಗಳಿಗೆ ಬೆಚ್ಚನೆಯ ವಾತಾವರಣ ಸೃಷ್ಟಿಸಲು ಕಿಚ್ಚು ಹಾಯಿಸುವುದು ವಾಡಿಕೆ. ಸುಗ್ಗಿ ಕಾಲ ಮುಗಿದು ಬೆಳೆಗಳು ರೈತರ ಕೈ ಸೇರಿದ ಖಷಿಯಲ್ಲಿ ಎಲ್ಲರೂ ಸಾಮೂಹಿಕವಾಗಿ ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ನವ ಧಾನ್ಯಗಳನ್ನು ರಾಶಿ ಹಾಕಿ ಪೂಜೆ ಮಾಡುತ್ತಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗುವಂತೆ ಪ್ರೇರೇಪಿಸಲು ಈ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.