ಚಿಕ್ಕಬಳ್ಳಾಪುರ: ಖನಿಜಗಳಿಂದ ಹಿಡಿದು ಉಡುಪುಗಳವರೆಗೆ, ನಿರ್ಮಾಣದಿಂದ ಹಿಡಿದು ವೈದ್ಯಕೀಯ, ಖಗೋಳಶಾಸ್ತ್ರದವರೆಗೆ ಎಲ್ಲಾ ಕ್ಷೇತ್ರಗಳಿಗೆ ಭಾರತ ಕೊಡುಗೆ ನೀಡಿದೆ. ಭಾರತ ಕೊಡುಗೆ ನೀಡದ ಯಾವ ಕ್ಷೇತ್ರವೂ ಇಲ್ಲ. ಭಾರತ ಜ್ಞಾನದ ಕೇಂದ್ರವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ' ದ 49ನೇ ದಿನವಾದ ಶುಕ್ರವಾರ ಅವರು ಆಶೀರ್ವಚನ ನೀಡಿದರು.

ಭಾರತದ ವಿಶ್ವವಿದ್ಯಾಲಯಗಳು ಪೂರ್ವ ಮತ್ತು ಪಶ್ಚಿಮ ದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲಿಸಿವೆ. ನಮ್ಮ ಶಿಕ್ಷಕರಿಂದ ಕಲಿಯಲು ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಇಲ್ಲಿಗೆ ಬರುತ್ತಿದ್ದರು. ಇಂತಹ ಹಲವು ಅದ್ಬುತಗಳು ದೇಶದಲ್ಲಿ ನಡೆದಿದೆ. ಭಾರತ ಇದೀಗ ಮತ್ತೆ ಬೆಳೆಯುತ್ತಿದೆ. ಭಾರತದ ಶಕ್ತಿಯನ್ನು ಗುರುತಿಸುವ ಸಮಯ ಬಂದಿದೆ. ಆಧ್ಯಾತ್ಮಿಕತೆಯಲ್ಲಿ ಮಾತ್ರವಲ್ಲದೆ ಜಾಗತಿಕ ಆರ್ಥಿಕ ಅಭಿವೃದ್ಧಿಗೂ ಭಾರತವು ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತನ್ನು ವಸುಧೈವ ಕುಟುಂಬಕಂ ಎಂದು ಹೇಳಿದ್ದಾರೆ. ಈ ಮಹಾನ್ ಕಲ್ಪನೆಯಲ್ಲಿ ಜಗತ್ತನ್ನು ಒಂದುಗೂಡಿಸುವ ಉದ್ದೇಶವನ್ನು ಮತ್ತಷ್ಟು ಹೆಚ್ಚಿಸಲು ನಾವು ಸಂತೋಷಪಡುತ್ತೇವೆ. ಏಕೆಂದರೆ ಒಂದು ಕುಟುಂಬ ಎಂದು ತಿಳಿದ ನಂತರ ನಿಮಗೆ ಪರಸ್ಪರ ಏನು ಮಾಡಬೇಕೆಂದು ತಿಳಿಯುತ್ತದೆ. ಒಬ್ಬರನ್ನೊಬ್ಬರು ಹೇಗೆ ನೋಡಿಕೊಳ್ಳಬೇಕೆಂದು ತಿಳಿಯುತ್ತದೆ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸತ್ಯ ಸಾಯಿ ಸಂಸ್ಥೆಯು ಅನ್ನ, ಆರೋಗ್ಯ, ಅಕ್ಷರದ ನಿಸ್ವಾರ್ಥ ಸೇವೆಗಳನ್ನು ನೀಡುತ್ತಿದೆ. ಇದೀಗ 600 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು, ಬೇಷರತ್ ಸೇವೆಗಾಗಿ ಆರಂಭವಾಗುತ್ತಿದೆ. ಜಗತ್ತು ಘರ್ಷಣೆಗಳು, ಸ್ಪರ್ಧೆ ಮತ್ತು ಸಂಕುಚಿತ ಸ್ವಾರ್ಥಗಳಿಂದ ವಿಭಜನೆಯಾಗುತ್ತಿರುವಾಗ, ಭಾರತವು ಜಾಗತಿಕ ಸಹೋದರತ್ವದ ಕಾಲಾತೀತ ಜ್ಞಾನವನ್ನು ಮಾನವೀಯತೆಯೊಂದಿಗೆ ಹಂಚಿಕೊಳ್ಳುವ ವಿಶಿಷ್ಟ ಜವಾಬ್ದಾರಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿಯನ್ನೂ ಓದಿ | ಸತ್ಯ ಸಾಯಿ ಗ್ರಾಮದಲ್ಲಿ ಉಮಾ-ಮಹೇಶ್ವರ ದೇಗುಲ ಲೋಕಾರ್ಪಣೆ: ಇದು ಭೂ ಕೈಲಾಸ ಎಂದ ಸದ್ಗುರು ಶ್ರೀ ಮಧುಸೂದನ ಸಾಯಿ
ವಿಯೆಟ್ನಾಂ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಗುಯೆನ್ ವ್ಯಾನ್ ಡಂಗ್ (Nguyen Van Dung) ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ಘೋಷಿಸಲಾಯಿತು. ವ್ಯಾನ್ ಡಂಗ್ ಅವರ ಅನುಪಸ್ಥಿತಿಯಲ್ಲಿ ವಿಯೆಟ್ನಾಂ ಪ್ರತಿನಿಧಿ ಅಸಾಕೊ ಪಾಂ (Asako Pham) ಅವರು ಪ್ರಶಸ್ತಿ ಸ್ವೀಕರಿಸಿದರು.