ಚಿಕ್ಕಬಳ್ಳಾಪುರ: ಇಳಿ ವಯಸ್ಸಿನಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದರ ಜೊತೆಗೆ, ನಿಯಮಿತವಾಗಿ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ಮತ್ತು ವೈದ್ಯಕೀಯ ತಪಾಸಣೆಗೆ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಮಂಡಿಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಕೆ. ಮೇಘಶ್ರೀ ಸಲಹೆ ನೀಡಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ವತಿಯಿಂದ ಆಯೋಜಿಸಿದ್ದ ‘ತಿಂಗಳಿಗೊಮ್ಮೆ ಉಚಿತ ಆರೋಗ್ಯ ಸಲಹೆ’ ಕಾರ್ಯಕ್ರಮದಲ್ಲಿ ಮಾತನಾಡಿದರು
ವಯಸ್ಸಾದಂತೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ನೆಮ್ಮದಿಗೂ ಮಹತ್ವ ನೀಡಬೇಕು. ಸುಲಭವಾಗಿ ಜೀರ್ಣವಾಗುವ, ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ನಾರಿನಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಪ್ರತಿದಿನ ಲಘು ನಡಿಗೆ, ಯೋಗ ಅಥವಾ ಪ್ರಾಣಾಯಾಮ ಮಾಡುವುದರಿಂದ ದೇಹವನ್ನು ಕ್ರಿಯಾಶೀಲವಾಗಿರಿಸಿಕೊಳ್ಳಬಹುದು ಎಂದರು.
ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಲು ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಕಷ್ಟು ನಿದ್ರೆ, ವ್ಯಾಯಾಮ ಹಾಗೂ ಸಮತೋಲಿತ ಆಹಾರ ಪದ್ಧತಿ ಆರೋಗ್ಯಕರ ಜೀವನಕ್ಕೆ ಪೂರಕ ವಾಗಿವೆ. ಕುಟುಂಬದ ಸದಸ್ಯರು, ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ. ಕೃಷ್ಣ ಮಾತನಾಡಿ, ಕಳೆದ ಐದು ವರ್ಷಗಳಿಂದ ನಿವೃತ್ತ ಸರ್ಕಾರಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಸಂಘವು ನಿಯಮಿತ ವಾಗಿ ಆರೋಗ್ಯ ಸಲಹಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿವಿಧ ವೈದ್ಯರು ಭಾಗವಹಿಸಿ ನೀಡುತ್ತಿರುವ ಸಲಹೆಗಳು ಹಿರಿಯ ನಾಗರಿಕರಿಗೆ ಉಪಯುಕ್ತವಾಗಿವೆ ಎಂದರು.
ಸಂಘದ ಕಾರ್ಯದರ್ಶಿ ತಿರುಮಲಪ್ಪ ಮಾತನಾಡಿ, ಬದಲಾಗುತ್ತಿರುವ ಆಹಾರ ಪದ್ಧತಿ, ಮಾನಸಿಕ ಒತ್ತಡ ಹಾಗೂ ಜೀವನಶೈಲಿಯಿಂದಾಗಿ ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚುತ್ತಿವೆ. ಕೆಲವರು ವೈದ್ಯಕೀಯ ತಪಾಸಣೆಯಲ್ಲಿ ಕಾಯಿಲೆ ಪತ್ತೆಯಾಗಬಹುದು ಎಂಬ ಭಯದಿಂದ ತಪಾಸಣೆಗೆ ಹಿಂದೇಟು ಹಾಕುತ್ತಾರೆ. ಇದರಿಂದ ಕಾಯಿಲೆ ಉಲ್ಬಣಿಸಿದ ಬಳಿಕ ಸಂಕಷ್ಟ ಅನುಭವಿಸುವಂತಾಗುತ್ತದೆ. ಇಂತಹ ಉಚಿತ ಆರೋಗ್ಯ ಸಲಹಾ ಕಾರ್ಯಕ್ರಮಗಳಲ್ಲಿ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆಯಲು ಸಾಧ್ಯವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಲಹೆ ನೀಡಿದ ಡಾ.ಬಿ.ಕೆ. ಮೇಘಶ್ರೀ ಅವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ರೆಡ್ಡಿ, ದಸ್ತಗೀರ್, ಜಯರಾಮರೆಡ್ಡಿ, ಹೈದರಾಲಿಖಾನ್, ನಾರಾಯಣಸ್ವಾಮಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.