ಚಿಕ್ಕಬಳ್ಳಾಪುರ: ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಮಾನವ ಸೇವೆಯೇ ಶ್ರೇಷ್ಠ ಮಾರ್ಗ ವಾಗಿದ್ದು, ಶಕ್ತಿ ಮತ್ತು ಸಾಮರ್ಥ್ಯ ಹೊಂದಿರುವವರು ಸಮಾಜದ ಒಳಿತಿಗಾಗಿ ಕೈಜೋಡಿಸಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ತಾಲೂಕಿನ ಮುದ್ದೇನಹಳ್ಳಿ ಸಮೀಪದ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ನಡೆದ ಮಾಧ್ಯಮ ಮಿತ್ರರೊಂದಿಗೆ ಸೌಹಾರ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ. ಕೆಲಸ ಹೆಚ್ಚು, ಪ್ರಚಾರ ಕಡಿಮೆ ಇರಬೇಕು ಎಂಬುದು ಸತ್ಯಸಾಯಿ ಬಾಬಾ ಅವರ ಸಂದೇಶವಾಗಿದ್ದು, ಅದನ್ನೇ ನಮ್ಮ ಸೇವಾ ಸಂಸ್ಥೆ ಧ್ಯೇಯವನ್ನಾಗಿಸಿಕೊಂಡಿದೆ" ಎಂದರು.
ತಾವು ಛತ್ತೀಸ್‌ಗಢದಲ್ಲಿ ಜನಿಸಿದ್ದು, ತಮ್ಮ ಪೋಷಕರು ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ಭಕ್ತರಾಗಿದ್ದರಿಂದ ಉನ್ನತ ಶಿಕ್ಷಣಕ್ಕಾಗಿ ಪುಟ್ಟಪರ್ತಿಗೆ ಬರುವ ಅವಕಾಶ ದೊರೆಯಿತು. ಅಲ್ಲಿ ಸತ್ಯಸಾಯಿ ಬಾಬಾ ಅವರ ಆಶೀರ್ವಾದದಿಂದ ಜೀವನದ ದಿಕ್ಕು ಬದಲಾಯಿತು. "ಕನ್ನಡ ಕಲಿಯಿರಿ ಹಾಗೂ ಕರ್ನಾಟಕವನ್ನೇ ಕಾರ್ಯಕ್ಷೇತ್ರವಾಗಿಸಿಕೊಳ್ಳಿ" ಎಂಬ ಬಾಬಾ ಅವರ ಮಾರ್ಗದರ್ಶನ ದಿಂದ ಇಂದು ಕನ್ನಡದಲ್ಲಿ ಮಾತನಾಡುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.
ಇದನ್ನೂ ಓದಿ: Chinthamani News: ಜು.11ರಂದು ಬೆಂಗಳೂರಿಗೆ ಚಿಂತಾಮಣಿಯಿಂದ ಬಸ್ ವ್ಯವಸ್ಥೆ; ಸರ್ಕಾರಿ ನೌಕರರಿಗೆ ಆರ್. ಅಶೋಕ್ ಕುಮಾರ್ ಕರೆ
ಸುಮಾರು ಐವತ್ತು ವರ್ಷಗಳ ಹಿಂದೆಯೇ ಸತ್ಯಸಾಯಿ ಬಾಬಾ ಮುದ್ದೇನಹಳ್ಳಿಯನ್ನು ಆಶೀರ್ವದಿಸಿ "ಸತ್ಯಸಾಯಿ ಗ್ರಾಮ" ಎಂದು ನಾಮಕರಣ ಮಾಡಿದ್ದರು. ಈ ಕ್ಷೇತ್ರ ರಾಜ್ಯಕ್ಕೆ ದಾರಿದೀಪವಾಗಲಿದೆ ಎಂಬ ಅವರ ಸಂಕಲ್ಪ ಇಂದು ಸಾಕಾರಗೊಂಡಿದೆ ಎಂದು ತಿಳಿಸಿದರು.
ಆರೋಗ್ಯ ಸೇವೆ ವ್ಯಾಪಾರವಾಗಬಾರದು
ಸಮಾಜದಲ್ಲಿ ಆರೋಗ್ಯ ಸೇವೆ ವ್ಯಾಪಾರದ ವಸ್ತುವಾಗಬಾರದು. ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಉಚಿತವಾಗಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗಿದೆ. ಇದುವರೆಗೆ ಸುಮಾರು 13 ಲಕ್ಷಕ್ಕೂ ಹೆಚ್ಚು ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. ಬಾಗೇಪಲ್ಲಿ ಭಾಗದಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆಯಿಂದ ಶಿಶು ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಉತ್ತಮ ಆರೋಗ್ಯ ವ್ಯವಸ್ಥೆಯೇ ಉತ್ತಮ ಸಮಾಜ ನಿರ್ಮಾಣ ಕ್ಕೆ ಆಧಾರವಾಗಿದೆ ಎಂದು ಹೇಳಿದರು.
ರಾಯಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲಾಗಿದ್ದು, ಅಲ್ಲಿನ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಸಹ ಶ್ಲಾಘಿಸಿದ್ದಾರೆ ಎಂದು ಹೇಳಿದರು.
ಉಚಿತ ಶಿಕ್ಷಣದಿಂದ ಸಮಾಜಮುಖಿ ಪರಿವರ್ತನೆ
ಬಡ ಮತ್ತು ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಮುಖಿ ವೈದ್ಯರು, ನರ್ಸ್ಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರನ್ನು ರೂಪಿಸ ಲಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಅನ್ನದಾಸೋಹ ಸೇವೆಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಯಿಲ್ಲದೆ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸತ್ಯಸಾಯಿ ಗ್ರಾಮ ಮಾನವಸೇವೆಯ ಜೀವಂತ ಮಾದರಿ: ನರಸಿಂಹಮೂರ್ತಿ
ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, ಆಧ್ಯಾತ್ಮಿಕತೆ ಮತ್ತು ಮಾನವ ಸೇವೆಯ ಸಮನ್ವಯವೇ ಸತ್ಯಸಾಯಿ ಗ್ರಾಮದ ವಿಶೇಷತೆ ಎಂದರು.
ಸತ್ಯಸಾಯಿ ಬಾಬಾ ಈ ಕ್ಷೇತ್ರಕ್ಕೆ 31 ಬಾರಿ ಭೇಟಿ ನೀಡಿ ಆಶೀರ್ವದಿಸಿದ್ದರು. ಅವರು 2011ರಲ್ಲಿ ದೇಹತ್ಯಾಗ ಮಾಡಿದರೂ ಅವರ ದೈವಿಕ ಸಂಕಲ್ಪವನ್ನು ಶ್ರೀ ಮಧುಸೂದನ ಸಾಯಿ ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.
ಸುಮಾರು 200 ವರ್ಷಗಳ ಹಿಂದೆ ಶಿಕ್ಷಣ, ಆರೋಗ್ಯ ಹಾಗೂ ಆಹಾರ ಸೇವೆಗಳು ವ್ಯಾಪಾರದ ವಸ್ತುಗಳಾಗಿರಲಿಲ್ಲ. ಆ ಮೌಲ್ಯಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ಸತ್ಯಸಾಯಿ ಗ್ರಾಮ ಕಾರ್ಯನಿರ್ವಹಿಸುತ್ತಿದೆ. 1977ರಲ್ಲಿ ಆರಂಭವಾದ ಈ ಸೇವಾ ಯಜ್ಞ ಇಂದು ವಿಶ್ವಮಟ್ಟದ ಸಂಸ್ಥೆಯಾಗಿ ಬೆಳೆದಿದ್ದು, ಶಿಕ್ಷಣ, ಆರೋಗ್ಯ ಹಾಗೂ ಆಧ್ಯಾತ್ಮಿಕ ಸೇವೆಗಳ ಮೂಲಕ ಲಕ್ಷಾಂತರ ಜನರಿಗೆ ಆಶಾಕಿರಣವಾಗಿದೆ ಎಂದು ಹೇಳಿದರು.
ಪತ್ರಕರ್ತರಿಗೆ ಉಚಿತ ಆರೋಗ್ಯ ಕಾರ್ಡ್
ಜಿಲ್ಲೆಯ ಸೇರಿದಂತೆ ರಾಜ್ಯದ ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಸತ್ಯಸಾಯಿ ಗ್ರಾಮದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಆರೋಗ್ಯ ಕಾರ್ಡ್ಗಳನ್ನು ನೀಡಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ಪತ್ರಕರ್ತರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳು ವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.