ಚಿಕ್ಕಬಳ್ಳಾಪುರ: ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಯಾರೇ ಆಗಿರಲಿ ಸ್ವಂತ ದುಡಿಮೆಯ ಹಣದಿಂದ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಾಗ ಮಾತ್ರವೇ ಭಗವಂತನ ಪ್ರೀತಿಗೆ ಪಾತ್ರ ವಾಗಲು ಸಾಧ್ಯ. ನನ್ನ ಜೀವನದಲ್ಲಿ ಈ ತತ್ವವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದು ಹಿರಿಯ ವಕೀಲರು ಸಮಾಜವೇವಕರಾದ ಆರ್.ಮಟಮಪ್ಪ ತಿಳಿಸಿದರು.
ನಗರದ ಜೈಭೀಮ್ ನಗರದ ಪಂಚಗಿರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಜನ್ಮದಿನದ ಅಂಗವಾಗಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
"ಮಕ್ಕಳು ತಮ್ಮ ಬೇರುಗಳನ್ನು ಮರೆಯಬಾರದು. ತಂದೆ-ತಾಯಿಯ ಮಾತಿಗೆ ಗೌರವ ನೀಡಿ, ಗುರುಗಳ ಮಾರ್ಗದರ್ಶನವನ್ನು ತಪ್ಪದೆ ಅನುಸರಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ತಲೆ ಬಗ್ಗಿಸಿ ಓದಿದರೆ, ಭವಿಷ್ಯದಲ್ಲಿ ತಲೆಯೆತ್ತಿ ನಡೆಯಬಹುದು. ಕಷ್ಟಗಳಿಗೆ ಹೆದರದೆ ಗುರಿಯತ್ತ ದೃಷ್ಟಿನೆಟ್ಟರೆ ಯಶಸ್ಸು ನಿಮ್ಮದಾಗುತ್ತದೆ. ಪುಸ್ತಕಗಳಿಗೆ ಮಾಡುವ ವೆಚ್ಚ ಎಂದಿಗೂ ವ್ಯರ್ಥ ವಾಗುವುದಿಲ್ಲ. ಪುಸ್ತಕದ ಜ್ಞಾನವೇ ಉತ್ತಮ ಸಮಾಜ ಮತ್ತು ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ" ಎಂದು ಹೇಳಿದರು.
"ನಾನು ರೈತ ಕುಟುಂಬದ ಹಿನ್ನೆಲೆಯಿಂದ ಬಂದವನು. ನನ್ನ ಪೂರ್ವಜರಿಂದ ಬಂದ ದಾನ ಧರ್ಮದ ಗುಣವೇ ಸಮಾಜ ಸೇವೆಯತ್ತ ನನ್ನನ್ನು ಪ್ರೇರೇಪಿಸಿದೆ. ನನ್ನ ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡುವ ಸಂಕಲ್ಪ ಮಾಡಿಕೊಂಡಿದ್ದೇನೆ. ಈ ಕಾರ್ಯವನ್ನು ಹತ್ತಾರು ವರ್ಷಗಳ ಕಾಲದಿಂದ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ಮಾನಸ ವೃದ್ಧಾಶ್ರಮದಲ್ಲಿ ಹಿರಿಯರ ಆಶೀರ್ವಾದ ಪಡೆದು,ನಂತರ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದೇನೆ" ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ ಎಂದರು.
ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಉತ್ತಮ ಆಚಾರ-ವಿಚಾರ, ಸಂಸ್ಕಾರ ಹಾಗೂ ಜೀವನ ಮೌಲ್ಯ ಗಳನ್ನು ಬೋಧಿಸಿದಾಗ ಮಾತ್ರ ಅವರ ಸರ್ವತೋಮುಖ ಬೆಳವಣಿಗೆ ಸಾಧ್ಯ.
"ಈ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ದೇಶ–ವಿದೇಶಗಳಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣಕ್ಕಿಂತ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಭಾರ ಮುಖ್ಯೋಪಾಧ್ಯಾಯ ತಿಮ್ಮಣ್ಣ ಮಾತನಾಡಿ, "ಸಮಾಜ ಸೇವೆಯನ್ನು ಬದುಕಿನ ಧ್ಯೇಯ ವಾಗಿಸಿಕೊಂಡಿರುವ ಮಟಮಪ್ಪ ಅವರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ. ಜನ್ಮದಿನವನ್ನು ಸರಳವಾಗಿ ಆಚರಿಸಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಿರು ವುದು ಇತರರಿಗೂ ಮಾದರಿಯಾಗಿದೆ" ಎಂದರು. ಬಳಿಕ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯ ತಿಮ್ಮಣ್ಣ, ಸಹಶಿಕ್ಷಕ ಸುಬ್ರಹ್ಮಣ್ಯ, ಶಿಕ್ಷಕಿ ಚಂದ್ರಕಲಾ, ಮುನಿರಾಜು ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.