* ಚಿಕ್ಕಬಳ್ಳಾಪುರದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅಭಿಮತ
* ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರು
* ಸಮಾಜದಲ್ಲಿ ಅಸಮಾನತೆ ಇರುವವರೆಗೆ ಮೀಸಲಾತಿ ಅತ್ಯಗತ್ಯ
* ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಯುವ ಸಮುದಾಯದ ಪಾತ್ರ ಹಿರಿದು
ಚಿಕ್ಕಬಳ್ಳಾಪುರ: ಪ್ರಜಾಪ್ರಭುತ್ವದ ತತ್ವಗಳು, ಆಶಯಗಳು ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಸಾರಿಗೆ ಸಚಿವ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್(Byrathi Suresh) ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದ ಕನ್ನಡಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (International Day of Democracy) ಉದ್ಘಾಟಿಸಿ ಮಾತನಾಡಿದರು. ಕೆಲವರು ಮೀಸಲಾತಿ ತೆಗೆಯಬೇಕೆಂದು ಹೇಳುತ್ತಿದ್ದಾರೆ. ಆದರೆ, ಸಮಾಜದಲ್ಲಿ ಅಸಮಾನತೆ ಇರುವವರೆಗೆ ಮೀಸಲಾತಿ ಇರಲೇಬೇಕು ಎಂದು ಪ್ರತಿಪಾದಿಸಿದರು.
ಹಿಂದುಳಿದ, ದೀನ ದಲಿತರ ಸಬಲೀಕರಣಕ್ಕೆ ಮೀಸಲಾತಿ ಅತ್ಯಗತ್ಯವಾಗಿದೆ. ಒಂದು ವೇಳೆ ಮೀಸಲಾತಿ ತೆಗೆದರೆ ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಮುಂದು ವರಿಯುತ್ತಾರೆ. ಹೀಗಾಗಿ ಅಸಮಾನತೆಯ ಕಂದಕ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ನಾವೆಲ್ಲಾ ಭಾರತೀಯರು: ಮೊದಲು ನಾವೆಲ್ಲಾ ಭಾರತೀಯರು. ಭಾರತೀಯರಾಗಿಯೇ ಸಹಬಾಳ್ವೆಯಿಂದ ಜೀವನ ಸಾಗಿಸೋಣ. ನಂತರ ನಮ್ಮ ಜಾತಿ, ಧರ್ಮದ ಬಗ್ಗೆ ಚಿಂತಿಸೋಣ ಎಂದು ಬೈರತಿ ಸುರೇಶ್ ಕರೆ ನೀಡಿದರು.
ಭಗವದ್ಗೀತೆ, ಕುರಾನ್, ಬೈಬಲ್
ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮಗೆ ಪರಮೋಚ್ಛವಾದ ಸಂವಿಧಾನ ನೀಡಿದ್ದಾರೆ. ಅದುವೇ ನಮಗೆ ಭಗವದ್ಗೀತೆ, ಅದುವೇ ಕುರಾನ್ ಮತ್ತು ಬೈಬಲ್ ಆಗಿದೆ ಎಂದರು.
ಅಂಬೇಡ್ಕರ್ ಅವರು ಒಂದೇ ವರ್ಗಕ್ಕೆ ಸೀಮಿತವಾಗಿದ್ದ ಅಧಿಕಾರವನ್ನು ಎಲ್ಲಾ ವರ್ಗಗಳಿಗೂ ಸಿಗುವಂತೆ ಮಾಡಿದ ಧೀಮಂತ ನಾಯಕರಾಗಿದ್ದಾರೆ. ಅವರು ಕೊಟ್ಟಿರುವ ಸಂವಿಧಾನ ನಮ್ಮ ದೇಶದ ಬೆನ್ನೆಲುಬಾಗಿದ್ದರೆ, ಅದರ ಪೀಠಿಕೆ ಆತ್ಮವಾಗಿದೆ ಎಂದು ಬಣ್ಣಿಸಿದರು.
ಜೀತ ಪದ್ಧತಿ, ಬಡತನ, ಅಸ್ಪೃಶ್ಯತೆ ನಿರ್ಮೂಲನೆ ಮಾಡಲು ಆರೋಗ್ಯ, ಉದ್ಯೋಗದಂತಹ ಶಾಸನಬದ್ಧ ಅವಕಾಶಗಳನ್ನು ಸಂವಿಧಾನದ ಮೂಲಕ ನೀಡುವುದರೊಂದಿಗೆ ಅಂಬೇಡ್ಕರ್ ಅದರ ಆತ್ಮ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಹಬಾಳ್ವೆ, ಪ್ರಜಾಪ್ರಭುತ್ವ ವ್ಯವಸ್ಥೆ, ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಅನೇಕ ಅಂಶಗಳು ಸಂವಿಧಾನದ ಮೌಲ್ಯಗಳಲ್ಲಿ ಅಡಗಿವೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದಂತೆ we cannot treat equals unequally and unequals equally ಇದು ಅಸಮಾನತೆಯ ವ್ಯವಸ್ಥೆಯಲ್ಲಿ ಸಮಾನತೆಯನ್ನು ಹೇಗೆ ಸೃಷ್ಟಿಸಬಹು ದೆಂಬ ತತ್ವವನ್ನು ಸಾರುತ್ತದೆ ಎಂದು ಹೇಳಿದರು.
ಈ ಆಶಯದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ಪ್ರತಿ ವರ್ಷ ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಅತ್ಯಂತ ವಿಜೃಂಭಣೆ ಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ವಿಷಯ ಯುವ ಸಂಸತ್ತು. ಈ ದಿನವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ನಾಡಿನೆಲ್ಲೆಡೆ ಯುವ ಸಂಸತ್ತು ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ವಿಚಾರದಲ್ಲಿ ಯುವ ಜನರ ಪಾತ್ರ ಪ್ರಮುಖವಾಗಿರುತ್ತದೆ. ಈ ದಿಸೆಯಲ್ಲಿ ಯುವ ಸಮೂಹ ಅತ್ಯಂತ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಪ್ರಜಾಪ್ರಭುತ್ವದ ಆಶಯಗಳು ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಹೀಗಾದಲ್ಲಿ ಮಾತ್ರ ವ್ಯಕ್ತಿಯ ಮತ್ತು ದೇಶ, ಸಮಾಜದ ಬಹುತೇಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಪ್ರತಿಯೊಬ್ಬರಿಗೂ ತಮ್ಮದೇ ಆದ ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಇವೆ. ಆದರೆ, ಅವೆಲ್ಲವನ್ನೂ ಮೀರಿ ನಾವೆಲ್ಲರೂ ಭಾರತೀಯರಾಗಿ ಮತ್ತು ವಿಶ್ವಮಾನವರಾಗಿ ಬಾಳಬೇಕಾಗುತ್ತದೆ ಎಂದು ಅವರು ಹೇಳಿದರು.
ಇಷ್ಟೇ ಅಲ್ಲದೆ, ನಮ್ಮ ದೇಶವು ಸರ್ವ ಜನಾಂಗದ ಶಾಂತಿ ತೋಟವಾಗುತ್ತದೆ. ಇಂತಹ ಸಮಾಜ ನಿರ್ಮಾಣಕ್ಕೆ ಇಂದಿನ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಯುವ ಸಂಸತ್ತು ಕಾರ್ಯ ಕ್ರಮ ಭದ್ರ ಬುನಾದಿಯಾಗಲಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
ಸರ್ ಎಂವಿ ಸ್ಮರಣೆ
ಇದೇ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್ ಅವರು ದೇಶ ಕಂಡ ಮಹಾನ್ ವ್ಯಕ್ತಿತ್ವದ ಭಾರತರತ್ನ ಸರ್ ಎಂ ವಿಶ್ವೇರಯ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಾಧನೆಯನ್ನು ಕೊಂಡಾಡಿದರು.
ದೇಶ ನಿರ್ಮಾಣ ಮಾಡುವಲ್ಲಿ ಅವರ ಸೇವೆ ಅನನ್ಯ. ನಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ವಿಶ್ವೇಶ್ವರಯ್ಯ ಅಂದು ಹೇಳಿದ್ದ ಮಾತನ್ನು ಎಲ್ಲರೂ ಅಳವಡಿಕೊಳ್ಳಬೇಕೆಂದು ಕರೆ ನೀಡಿದರು.
ನಾನು ಮಾತನಾಡುವ ಮಂತ್ರಿಯಲ್ಲ
ಸಾರಿಗೆ ಸಚಿವ ಬೈರತಿ ಸುರೇಶ್ ಅವರು ತಮ್ಮ ಭಾಷಣದಲ್ಲಿ, ನಾನು ಮಾತನಾಡುವ ಮಂತ್ರಿಯಲ್ಲ. ಕೆಲಸ ಮಾಡುವ ಮಂತ್ರಿ ಎಂದು ಹೇಳಿದರು.
ಕೇವಲ ಭಾಷಣ ಮಾಡುತ್ತಾ ಹೋದರೆ ಕೆಲಸಗಳು ಆಗುವುದಿಲ್ಲ. ಹೀಗಾಗಿ ಮಾತಿಗಿಂತ ಕೃತಿ ಲೇಸು ಎಂಬುದನ್ನು ನಂಬಿದವನು ನಾನು. ಹೆಚ್ಚು ಭಾಷಣ ಮಾಡದೇ ಜಿಲ್ಲೆ ಮತ್ತು ನನಗೆ ನೀಡಿರುವ ಸಾರಿಗೆ ಇಲಾಖೆ ಉನ್ನತಿಗೆ ಅಗತ್ಯವಾದ ಕೆಲಸ ಮಾಡುವೆ ಎಂದರು.