ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಚಿಕ್ಕಬಳ್ಳಾಪುರದಲ್ಲಿ ಇಂದು ಎನ್‌ಡಿಎ ಮುಖಂಡರ ಮಹತ್ವದ ಸಭೆ

ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದ್ದು, ಎನ್‌ಡಿಎ(NDA) ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಪರವಾಗಿ ಚುನಾವಣಾ ಸಂಘಟನೆ ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ(South East Graduate Constituency Election)ಗೆ ಅಧಿಸೂಚನೆ ಪ್ರಕಟವಾಗಿರುವ ಬೆನ್ನಲ್ಲೇ ಎನ್‌ಡಿಎ ಘಟಕಗಳಲ್ಲಿ ಚುನಾವಣಾ ಚಟುವಟಿಕೆಗಳು ಚುರುಕುಗೊಂಡಿದ್ದು, ಬಿಜೆಪಿ-ಜೆಡಿಎಸ್(BJP-JDS) ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಚುನಾವಣಾ ಸಿದ್ಧತೆ ನಡೆಸಲು ಚಿಕ್ಕಬಳ್ಳಾಪುರದಲ್ಲಿ ಮಹತ್ವದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. 

ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದ್ದು, ಎನ್‌ಡಿಎ(NDA) ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಪರವಾಗಿ ಚುನಾವಣಾ ಸಂಘಟನೆ ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದ್ದಾರೆ.

ನಗರದ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಅವರು ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ಪರವಾಗಿ ಎನ್‌ಡಿಎ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಸಮನ್ವಯದಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: MLC Election: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ NDA ನಾಯಕರ ಸಭೆ; ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರೆದುರು ತೆರೆದಿಡಲು ಸಚಿವ ಜೋಶಿ ಸಲಹೆ

ಐದು ಕ್ಷೇತ್ರಗಳ ಮುಖಂಡರು ಒಂದೇ ವೇದಿಕೆಯಲ್ಲಿ

ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಶಾಸಕರು ಹಾಗೂ ಸಂಸದರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪದವೀಧರ ಮತದಾರರನ್ನು ಸಂಪರ್ಕಿಸುವುದು, ಕ್ಷೇತ್ರವಾರು ಸಂಘಟನೆ ರೂಪಿಸುವುದು, ಮತದಾರರ ಪಟ್ಟಿಯ ಆಧಾರದಲ್ಲಿ ಸಂಪರ್ಕ ಕಾರ್ಯ ನಡೆಸುವುದು ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.

ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳು ಒಳಗೊಂಡಿದ್ದು, ಚುನಾವಣಾ ವೇಳಾಪಟ್ಟಿಯಂತೆ ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅ.27ರಂದು ಮತ ಎಣಿಕೆ ನಡೆಯಲಿದೆ. 

ಬಿಜೆಪಿ–ಜೆಡಿಎಸ್ ಸಮನ್ವಯಕ್ಕೆ ಒತ್ತು

ಎನ್‌ಡಿಎ ಅಭ್ಯರ್ಥಿಯ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಘಟಕಗಳ ನಡುವೆ ಸಮನ್ವಯ ಸಾಧಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B Y Vijayendra) ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(H D Kumaraswamy) ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿಯೂ ವಿಧಾನ ಪರಿಷತ್ ಚುನಾವಣೆಯ ಕುರಿತು ಎನ್‌ಡಿಎ ಮುಖಂಡರ ಸಭೆ ನಡೆದಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರು ಸಮನ್ವಯದಿಂದ ಚುನಾವಣೆಯನ್ನು ಎದುರಿಸುವ ಕುರಿತು ಚರ್ಚಿಸಲಾಗಿದೆ. 

ಸುರೇಶ್ ಅವರ ಪರವಾಗಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಘಟನೆಯನ್ನು ಸಕ್ರಿಯಗೊಳಿಸಿ ಪದವೀಧರ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಬೇಕು ಎಂದು ರಾಮಚಂದ್ರಗೌಡ ಮನವಿ ಮಾಡಿದರು.

ಎನ್‌ಡಿಎ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸೀಕಲ್ ಆನಂದ್‌ಗೌಡ, ದೇವರಾಜು, ಸುರೇಂದ್ರಗೌಡ, ಕನಕಪ್ರಸಾದ್, ಕೊತ್ತನೂರು ರವಿಚಂದ್ರ, ಚೆಲುವರಾಜ್, ಬಾಲು, ರಾಮಕೃಷ್ಣ, ಸುಬ್ಬು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.