ಚಿಕ್ಕಬಳ್ಳಾಪುರ : ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ ಬಳಿಕ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ (Deputy Chief Minister and Revenue Minister Dr. G. Parameshwara)ಅವರು ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದ ರೈತ ವೆಂಕಟೇಶ್ ಅವರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ರೈತರೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.
ರಾಗಿ ಬಿತ್ತನೆಗಾಗಿ ಜಮೀನನ್ನು ಉಳುಮೆ ಮಾಡಿ ಸಿದ್ಧಪಡಿಸಿದ್ದರೂ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಸಾಧ್ಯವಾಗಿಲ್ಲ ಎಂದು ರೈತರು ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ. ಪರಮೇಶ್ವರ್, ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸ್ಥಳದಲ್ಲಿದ್ದ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿದರು.
ಇದನ್ನೂ ಓದಿ: G Parameshwar: ಮಾನವೀಯತೆ ಕಲಿಸುವ ಕೆಲಸ ಆಗಬೇಕು: ಡಾ.ಜಿ. ಪರಮೇಶ್ವರ್
ಈ ಸಂದರ್ಭದಲ್ಲಿ ರೈತರು, ಬರಗಾಲದಲ್ಲಿ ದೊರೆಯುವ ಬೆಳೆ ವಿಮೆ ಪರಿಹಾರ ಮೊತ್ತ ರೈತರ ನಷ್ಟಕ್ಕೆ ಸಮರ್ಪಕವಾಗಿಲ್ಲ. ವಿಮಾ ಕಂಪನಿಗಳೊಂದಿಗೆ ಸರ್ಕಾರ ಸಭೆ ನಡೆಸಿ ಪರಿಹಾರ ಮೊತ್ತ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಪರವಾಗಿ ಸರ್ಕಾರವೇ ವಿಮಾ ಕಂತು ಪಾವತಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು.
ರೈತರಾದ ವೆಂಕಟಸ್ವಾಮಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ತಮ್ಮ ಕೃಷಿ ಸಂಕಷ್ಟ, ಮಳೆ ಕೊರತೆ ಹಾಗೂ ಬೆಳೆ ಹಾನಿಯ ಬಗ್ಗೆ ಡಿಸಿಎಂಗೆ ವಿವರಿಸಿದರು. ರೈತರ ಅಹವಾಲುಗಳನ್ನು ಆಲಿಸಿದ ಡಾ. ಪರಮೇಶ್ವರ್, ಸರ್ಕಾರ ರೈತರ ನೆರವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ತಾಲೂಕು ಕೃಷಿ ಇಲಾಖೆ ಉಪನಿರ್ದೇಶಕ ಮುನಿರಾಜು ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.