ಗುಡಿಬಂಡೆ: ಮೊಹರಂ(Moharram) ಅಂಗವಾಗಿ ಗುಡಿಬಂಡೆ ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಶೋಕಾಚರಣೆ ಹಾಗೂ ಮೆರವಣಿಗೆ ನಡೆಯಿತು. ಜಾಮಿಯಾ ಮಸೀದಿ ಸಮೀಪದ ಬಾಬಯ್ಯ ಗುಡಿಯಿಂದ ಆರಂಭವಾದ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಸಾವಿರಾರು ಭಕ್ತರು ಭಾಗವಹಿಸಿ ಭಾವೈಕ್ಯದ ಸಂದೇಶ ಸಾರಿದರು.
ಕಪ್ಪು ವಸ್ತ್ರ ಧರಿಸಿದ್ದ ಭಕ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಶೋಕಾಚರಣೆಯ ಸಂಕೇತವಾಗಿ ಕೆಲ ಭಕ್ತರು ಸಂಪ್ರದಾಯದಂತೆ ಎದೆ ಬಡಿದುಕೊಳ್ಳುವುದು ಹಾಗೂ ದೇಹದಂಡನೆ ಆಚರಿಸಿದರು. ಹಸನ್-ಹುಸೇನ್ ಅವರ ಸ್ಮರಣಾರ್ಥ ಹಸೇನ್ ಹಸೇನ್ ಎಂಬ ಘೋಷಣೆಗಳು ಮೊಳಗಿದವು. ಅನೇಕರು ಶೋಕ ಗೀತೆಗಳನ್ನು ಹಾಡುತ್ತಾ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: Gudibande News: ನೈಜ ಚುನಾವಣೆಯ ಅನುಭವ ಪಡೆದ ವಿದ್ಯಾರ್ಥಿಗಳು; ಪ್ರಜಾಪ್ರಭುತ್ವ ಮೌಲ್ಯಗಳ ಅರಿವು
ಮೆರವಣಿಗೆಗೆ ಮುನ್ನ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಮೌಲಾನಾಗಳು ಹಸನ್-ಹುಸೇನ್ ಅವರ ತ್ಯಾಗ, ಮಹತ್ವ ಹಾಗೂ ಮೊಹರಂ ಆಚರಣೆಯ ಧಾರ್ಮಿಕ ಹಿನ್ನೆಲೆಯ ಕುರಿತು ಉಪನ್ಯಾಸ ನೀಡಿದರು. ಬಳಿಕ ಜಾಮಿಯಾ ಮಸೀದಿ ಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಮೆರವಣಿಗೆ ಸಂಪೂರ್ಣ ಶಾಂತಿ ಯುತವಾಗಿ ನೆರವೇರಿತು.
ಆಯೋಜಕರು ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಅವರು ಧರ್ಮ ಹಾಗೂ ನ್ಯಾಯದ ರಕ್ಷಣೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ಸ್ಮರಣಾರ್ಥ ಮೊಹರಂ ಶೋಕಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಗುಡಿಬಂಡೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಯಾವುದೇ ಭೇದಭಾವವಿಲ್ಲದೆ ಪರಸ್ಪರ ಸಹಕಾರದಿಂದ ಈ ಆಚರಣೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರಿಬಿದನೂರು ತಾಲ್ಲೂಕಿನ ಅಲ್ಲಿಪುರ ಹಾಗೂ ಪೋತೇನಹಳ್ಳಿಯ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು, ಉರ್ದು ಅಕಾಡೆಮಿ ರಾಜ್ಯ ಸಮಿತಿ ಸದಸ್ಯ ಡಾ. ನಾಥಿಕ್ ಅಲ್ಲಿಪುರಿ, ಮೌಲಾನಾ ಜಾಹೇದ್ ಅಹ್ಮದ್, ಮೌಲಾನಾ ಲುಕ್ಮಾನ್ ಹೌದರ್, ಮೊಹಮ್ಮದ್ ಅಕಿಲ್, ಅಲಿಜಾನ್, ರಿಯಾಜ್ ಪಾಷಾ ಸೇರಿದಂತೆ ಮೊಹರಂ ಆಚರಣಾ ಸಮಿತಿ, ಫಾತಿಮಾ ಆಚರಣಾ ಸಮಿತಿ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.