ಚಿಕ್ಕಬಳ್ಳಾಫುರ: ನಾನಾ ಕಾರಣಗಳ ಹಿನ್ನೆಲೆಯಲ್ಲಿ ಕಲ್ಮಶಗೊಳ್ಳುವ ಮನಸ್ಸನ್ನು ಸ್ವಚ್ಛ ಗೊಳಿಸಲು ಆಧ್ಯಾತ್ಮಿಕ ಚಿಂತನೆಯ ಕಾರ್ಯ ಚಟುವಟಿಕೆ ಸಹಕಾರಿ ಎಂದು ಆದಿಚುಂಚನ ಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ(Adichunchan Giri Mutt, Shri Nirmalanandanath Swamiji) ಅಭಿಪ್ರಾಯಪಟ್ಟರು.
ತಾಲೂಕಿನ ಸೂಲಾಲಪ್ಪದಿನ್ನೆಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಕೈಗೊಂಡಿದ್ದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ 15ನೇ ವಾರ್ಷಿಕೋತ್ಸವ, ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿಯ 81ನೇ ಜಯಂತ್ಯುತ್ಸವ, ಚುಂಚಶ್ರೀ ಶ್ರೀಗಳ 13ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವವನ್ನುದ್ದೇಶಿಸಿ ಮಾತನಾಡಿದರು.
ದೇಹ ಹಾಗೂ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುವುದರ ಅಗತ್ಯವಿದೆ. ತಿಳಿಯಾದ ನೀರು ಕದಡುವಂತೆ, ಹಾಗೆಯೇ ಕಲ್ಮಶಗೊಂಡಿರುವ ನೀರನ್ನು ಶುದ್ದೀಕರಣ ಗೊಳಿಸುವ ಮಾದರಿಯಲ್ಲಿ ಆಂತರಿಕ ಬೌದ್ಧಿಕ ಪ್ರಜ್ಞೆಯು ಎಚ್ಚೆತ್ತುಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸತ್ಕಾರ್ಯ ಚಟುವಟಿಕೆಯು ಒಳ್ಳೆಯ ಪ್ರಭಾವ ಬೀರುತ್ತದೆ ಎಂದರು.
ಮನಸ್ಸಿಗೆ ಅನುಗುಣವಾಗಿ ದೃಷ್ಟಿ ಗೋಚರವಾಗುತ್ತದೆ. ದೇಗುಲಕ್ಕೆ ವ್ಯವಹಾರಿಕ ನಿರೀಕ್ಷೆ ಯಲ್ಲಿ ಹೋದಾಗ ಆ ಭಾವದ ಅನುಭವವೇ ಆಗುತ್ತದೆ. ಭಕ್ತಿಯು ಗೌಣವಾಗುತ್ತದೆ. ಪ್ರತಿಯೊಬ್ಬರೂ ಇಂದ್ರೀಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿದಿನ ಸೂರ್ಯನು ಉದಯಕ್ಕೆ ಮೊದಲೇ ಎದ್ದೇಳಬೇಕು. ಯೋಗ, ಧ್ಯಾನ, ಪ್ರಾಮಾಣಿಕ ಪರಿಶ್ರಮದಲ್ಲಿ ಶ್ರದ್ಧೆ, ಸೇವಾ ಚಟುವಟಿಕೆಯ ಮೂಲಕ ನೆಮ್ಮದಿ ಯುತ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾ ನಂದನಾಥ ಸ್ವಾಮೀಜಿ, ಶ್ರೀ ಅನ್ನದಾನಿ ಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು, ಐಪಿಎಸ್ ಅಧಿಕಾರಿ ಚೇತನ್ ಕುಮಾರ್, ಐಎಎಸ್ ಅಧಿಕಾರಿ ವಸಂತ್ ಕುಮಾರ್, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ ಎನ್.ಶಿವರಾಮರೆಡ್ಡಿ, ಪ್ರಾಂಶುಪಾಲ ಜಿ.ಟಿ.ರಾಜು, ಮತ್ತಿತರರು ಇದ್ದರು.
ವಿವಿಧ ಹೋಮ ಪೂಜೆ
ಮಹೋತ್ಸವದ ಅಂಗವಾಗಿ ದೇಗುಲದ ಆವರಣದಲ್ಲಿ ವಿಶೇಷ ಹೋಮ ಪೂಜಾ ಕಾರ್ಯ ಕ್ರಮ ಕೈಗೊಳ್ಳಲಾಯಿತು. ಸ್ವತಃ ಆದಿಚುಂಚನಗಿರಿ ಮಠದ ಶ್ರೀಗಳು ದೇವರಿಗೆ ಅಭಿಷೇಕ ನೆರವೇರಿಸಿದರು. ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.