ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gudibande News: ಕ್ರೀಡೆಯಿಂದ ಶಿಸ್ತು, ಆತ್ಮವಿಶ್ವಾಸ ವೃದ್ಧಿ: ಮುನಿಕೃಷ್ಣಪ್ಪ

ಪಠ್ಯ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೂ ಸಮಯ ಮೀಸಲಿಡ ಬೇಕು. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುವುದರ ಜತೆಗೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ಕ್ರೀಡೆ ಬೆಳೆಸುತ್ತದೆ

ಸೋಮೇನಹಳ್ಳಿ ಗ್ರಾಮದ ಪಿಎಂ ಶ್ರೀ ಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು.

ಗುಡಿಬಂಡೆ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಶಿಸ್ತು, ಆತ್ಮವಿಶ್ವಾಸ, ನಾಯಕತ್ವದ ಗುಣ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸಿ ಕೊಳ್ಳಲು ಸಾಧ್ಯ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ ಹೇಳಿದರು.

ತಾಲೂಕಿನ ಸೋಮೇನಹಳ್ಳಿ ಗ್ರಾಮದ ಪಿಎಂ ಶ್ರೀ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವಿನಿಂದ ಅಹಂಕಾರ ಪಡದೆ, ಸೋಲಿನಿಂದ ನಿರಾಶರಾಗದೆ ಎರಡನ್ನೂ ಸಮನಾಗಿ ಸ್ವೀಕರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎದುರಾಳಿಯನ್ನು ಗೌರವಿಸಿ ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧಿಸುವುದೇ ನೈಜ ಕ್ರೀಡಾ ಮನೋಭಾವ ಎಂದರು.

ಇದನ್ನೂ ಓದಿ: Gudibande News: ಸಮಾವೇಶ ಯಶಸ್ವಿಗೆ ಕರೆ: ಗುಡಿಬಂಡೆಯಲ್ಲಿ ಪೂರ್ವಭಾವಿ ಸಭೆ

ಪಠ್ಯ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೂ ಸಮಯ ಮೀಸಲಿಡ ಬೇಕು. ನಿಯಮಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುವುದರ ಜತೆಗೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ಕ್ರೀಡೆ ಬೆಳೆಸುತ್ತದೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಹನುಮಂತರಾಯಪ್ಪ ಮಾತನಾಡಿ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿ ಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಯೂ ಉತ್ತಮ ಪ್ರತಿಭೆಗಳಿದ್ದು, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ದೊರೆತರೆ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ಪ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.