ಚಿಕ್ಕಬಳ್ಳಾಪುರ: "ನಮ್ಮನ್ನು ಅರಿಯುವ ಅತ್ಯುತ್ತಮ ಮಾರ್ಗ ಪರೋಪಕಾರದ ಸೇವೆಯೇ" ಎಂಬ ಮಹಾತ್ಮ ಗಾಂಧೀಜಿ ಅವರ ಸಂದೇಶ ಮುದ್ದೇನಹಳ್ಳಿಯ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನೈಜವಾಗಿ ಸಾಕಾರಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಹೇಳಿದರು.
ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋ ಧನಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ದೇಶದ ಮೊದಲ ಅಂತಾರಾಷ್ಟ್ರೀಯ ಎಂಡೋ ಸ್ಕೋಪಿಕ್ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸಾ ಸಮ್ಮೇಳನ (ಐಇಆರ್‌ಸಿಎಸ್‌ಸಿ–2026) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಆಶ್ರಯದಲ್ಲಿ, ಮಣಿಪಾಲ್ ಆಸ್ಪತ್ರೆ ಹಾಗೂ ಎಸ್‌ಎಸ್ ಇನ್ನೋವೇಷನ್ಸ್ ಸಹಯೋಗದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾರತ, ಗ್ರೀಸ್, ಅಮೆರಿಕ, ಚೀನಾ, ಬ್ರೆಜಿಲ್, ಉಕ್ರೇನ್, ಜರ್ಮನಿ ಹಾಗೂ ವಿಯೆಟ್ನಾಂ ಸೇರಿದಂತೆ ಹಲವು ರಾಷ್ಟ್ರಗಳ ಹೃದಯ ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು. ಉಚಿತ ವೈದ್ಯಕೀಯ ಶಿಕ್ಷಣ ನೀಡುವ ಸಂಸ್ಥೆಯಲ್ಲಿ ಇಂತಹ ಅಂತಾ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿರುವುದು ದೇಶಕ್ಕೇ ಹೆಮ್ಮೆಯ ವಿಷಯ ಎಂದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸಿದ ಕಾನೂನು ಅಭಿರಕ್ಷಕರು
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸೇವಾ ಮನೋಭಾವದೊಂದಿಗೆ ಬಳಸಿದಾಗ ಮಾತ್ರ ಅದು ಮಾನವಕುಲಕ್ಕೆ ವರವಾಗುತ್ತದೆ. ಜ್ಞಾನವು ವ್ಯಾಪಾರದ ವಸ್ತುವಾಗದೆ ಸೇವೆಯ ಸಾಧನವಾದಾಗ ಸಮಾಜಕ್ಕೆ ಆಶಾಭಾವನೆ ಮೂಡುತ್ತದೆ. ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರ ಮಾರ್ಗ ದರ್ಶನದಲ್ಲಿ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಸಮಾಜಮುಖಿ ಯಾಗಿ ರೂಪಿಸಿರುವುದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅತ್ಯುತ್ತಮ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಸ್ವಾರ್ಥ ಸೇವೆ ಮತ್ತು ಜ್ಞಾನ ಹಂಚಿಕೆಯ ಕಾರ್ಯ ಸತ್ಯಸಾಯಿ ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಇದು ಇನ್ನೂ ಅನೇಕ ವರ್ಷಗಳ ಕಾಲ ಸಮಾಜಕ್ಕೆ ಆಶ್ರಯವಾಗಿ ಮುಂದು ವರಿಯಲಿ ಎಂದು ಶುಭ ಹಾರೈಸಿದರು.
ಸಮ್ಮೇಳನ ಉದ್ಘಾಟಿಸಿದ ಸಂಘಟನಾ ಕಾರ್ಯದರ್ಶಿ ಡಾ.ಸಿ.ಎಸ್.ಹಿರೇಮಠ ಮಾತನಾಡಿ, ಜಾಗತಿಕ ವೈದ್ಯಕೀಯ ತಜ್ಞರೊಂದಿಗೆ ನೇರ ಸಂವಾದ ನಡೆಸುವ ಮೂಲಕ ವೈದ್ಯರು ಹೊಸ ತಂತ್ರಜ್ಞಾನ ಗಳನ್ನು ಕಲಿತು ಸುರಕ್ಷಿತವಾಗಿ ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳಲು ಈ ಸಮ್ಮೇಳನ ವೇದಿಕೆ ಯಾಗಲಿದೆ ಎಂದರು.
ಎಸ್‌ಎಸ್ ಇನ್ನೋವೇಷನ್ಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಸುಧೀರ್ ಶ್ರೀವಾಸ್ತವ ಮಾತನಾಡಿ, ಸ್ವದೇಶಿ ರೋಬೋಟಿಕ್ ತಂತ್ರಜ್ಞಾನದಿಂದ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಸಾಧ್ಯವಾಗಲಿದ್ದು, ಈ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಕರುಣೆಯುಳ್ಳ ವೈದ್ಯರ ಅಗತ್ಯ: ಸದ್ಗುರು ಮಧುಸೂಧನ್ ಸಾಯಿ
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂಧನ್ ಸಾಯಿ ಮಾತ ನಾಡಿ, ವೈದ್ಯಕೀಯ ಶಿಕ್ಷಣದ ಗುರಿ ಕೇವಲ ಪರಿಣತ ವೈದ್ಯರನ್ನು ರೂಪಿಸುವುದಲ್ಲ; ಕರುಣೆಯುಳ್ಳ ವೈದ್ಯರನ್ನು ಸಮಾಜಕ್ಕೆ ನೀಡುವುದಾಗಿದೆ ಎಂದರು.
ಹತ್ತು ವರ್ಷಗಳ ಹಿಂದೆ ಮೂಲಸೌಕರ್ಯವಿಲ್ಲದಿದ್ದ ಈ ಪ್ರದೇಶ ಇಂದು ಜಾಗತಿಕ ಮಟ್ಟದ ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಗ್ರಾಮೀಣ ಆರೋಗ್ಯ ಸೇವೆಯ ಕೇಂದ್ರವಾಗಿ ಬೆಳೆಯ ಲಾಗಿದೆ. ವಿಶ್ವದ ಮೊದಲ ಉಚಿತ ಎಂಬಿಬಿಎಸ್ ಕಾಲೇಜು ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಸೇವೆಗಳು ಭಾರತ ಮಾತ್ರವಲ್ಲದೆ ನೈಜೀರಿಯಾ ಮತ್ತು ಶ್ರೀಲಂಕಾಕೂ ವಿಸ್ತರಿಸಿವೆ ಎಂದು ತಿಳಿಸಿದರು.
ರಿಮೋಟ್ ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಮತ್ತೊಂದು ಮೈಲುಗಲ್ಲು
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಕನಿಷ್ಠ ಘಾಸಿಗೊಳಿಸುವ (ಮಿನಿಮಲಿ ಇನ್ವೇಸಿವ್) ಹಾಗೂ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯ ನೇರ ಪ್ರದರ್ಶನ ನಡೆಯಿತು. ಗ್ರೀಸ್, ಕೊಯಮ ತ್ತೂರು ಹಾಗೂ ಮುದ್ದೇನಹಳ್ಳಿಯ ಆಸ್ಪತ್ರೆಗಳಿಂದ ಏಕಕಾಲದಲ್ಲಿ ಶಸ್ತ್ರಚಿಕಿತ್ಸೆಗಳ ನೇರ ಪ್ರಸಾರ ನಡೆಸಲಾಯಿತು.
ದೆಹಲಿಯಲ್ಲಿದ್ದ ಎಸ್‌ಎಸ್ ಇನ್ನೋವೇಷನ್ಸ್ ಸಂಸ್ಥಾಪಕ ಡಾ.ಸುಧೀರ್ ಶ್ರೀವಾಸ್ತವ ಅವರು ದೂರಸ್ಥ ತಂತ್ರಜ್ಞಾನದ ಮೂಲಕ ಮೂವರು ರೋಗಿಗಳಿಗೆ ಯಶಸ್ವಿಯಾಗಿ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದರು. ದೇಶದ ಉಚಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ಮತ್ತು ಉಚಿತ ಪ್ರಾಯೋಗಿಕ ತರಬೇತಿ ನೀಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೂ ಒಂದಾಗಿದೆ.
ಸಮ್ಮೇಳನವು ಭಾನುವಾರ (ಜು.12) ಎಂಡೋಸ್ಕೋಪಿಕ್ ಹಾಗೂ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯ ವೆಟ್‌ಲ್ಯಾಬ್ (ಪ್ರಾಯೋಗಿಕ) ತರಬೇತಿ ಅಧಿವೇಶನಗಳೊಂದಿಗೆ ಮುಂದುವರಿಯ ಲಿದೆ.