ಚಿಕ್ಕಬಳ್ಳಾಪುರ : ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಬಲ ನೀಡುವ ಉದ್ದೇಶದಿಂದ ಟ್ರಕ್ ಮತ್ತು ಲಾರಿ ಡ್ರೈವರ್ ಹಾಗೂ ಕ್ಲಿನರ್ ಮಕ್ಕಳಿಗೆ ಶ್ರೀರಾಮ್ ಸೇವಾ ಸಂಕಲ್ಪ ಸಂಸ್ಥೆಯು ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥಸ್ವಾಮೀಜಿ ನೇತೃತ್ವದಲ್ಲಿ ೩೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು.
ನಗರದ ಕನ್ನಡ ಭವನದಲ್ಲಿ ಬುಧವಾರ ಶ್ರೀರಾಮ್ ಸೇವಾ ಸಂಕಲ್ಪ ಸಂಸ್ಥೆ ವತಿಯಿಂದ ಏರ್ಪಡಿ ಸಿದ್ದ ಜಿಲ್ಲೆಯ ಟ್ರಕ್ ಹಾಗೂ ಲಾರಿ ಡ್ರೈವರ್ ಮತ್ತು ಕ್ಲಿನರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ತುಂಬುವ ಸ್ಫೂರ್ತಿ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶ್ರೀರಾಮ್ ಫೈನಾನ್ಸ್ ಅಂತಹ ಖಾಸಗಿ ಸಂಸ್ಥೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಜಿಲ್ಲೆಯ ಟ್ರಕ್ ಮತ್ತು ಲಾರಿ ಡ್ರೈವರ್ ಹಾಗೂ ಕ್ಲಿನರ್ ಕುಟುಂಬದ ಮಕ್ಕಳ ಶೈಕ್ಷಣಿಕ ಸಾಧನೆಗೆ ನೀರೆಯುವ ಕೆಲಸ ವನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸರಕಾರವೇ ಎಲ್ಲವನ್ನೂ ನೀಡಬೇಕು ಎನ್ನುವ ಮನೋಭಾವ ಬದಲಾಗಬೇಕಿದೆ. ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಉದ್ಯಮಿಗಳು, ಖಾಸಗಿ ಸಂಘ ಸಂಸ್ಥೆಗಳು ಬಡ ಕೃಷಿಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೀರೆಯುವ ಕೆಲಸ ಮಾಡಿದಾಗಲೇ ಸಮಸಮಾಜ ನಿರ್ಮಾಣ ಸಾಧುವಾಗಲಿದೆ. ಆಗಲೇ ರಾಷ್ಟçಕವಿ ಕುವೆಂಪು ಹೇಳುವ ಸರ್ವರಿಗೆ ಸಮಬಾಳು ಸಮಪಾಲು ದೊರೆಯಲಿದೆ ಎಂದರು.
ಸ್ಫೂರ್ತಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟ್ರಕ್ ಹಾಗೂ ಲಾರಿ ಡ್ರೈವರ್ ಮತ್ತು ಕ್ಲಿನರಗಳ ಒಟ್ಟು ೩೬೦ ಮಕ್ಕಳಿಗೆ ಅದಿಚುಂಚುನಗಿರಿ ಮಠದ ಮಂಗಳಾನಾಥ ಸ್ವಾಮಿಗಳು ವಿದ್ಯಾರ್ಥಿ ವೇತನವನ್ನು ವಿತರಿಸಿ ಬಾಳು ಬೆಳಗಲೆಂದು ಹಾರೈಸಿದರು.
ಇನ್ನೂ ಶ್ರೀ ರಾಮ್ ಸೇವಾ ಸಂಕಲ್ಪ ವತಿಯಿಂದ ಕಳೆದ ೧೨ ವರ್ಷಗಳಿಂದ ಟ್ರಕ್ ಮತ್ತು ಲಾರಿ ಡ್ರೈವರ್ ಹಾಗೂ ಕ್ಲಿನರ್ ನ ಮಕ್ಕಳಿಗೆ ಪ್ರತಿ ವರ್ಷವೂ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಮಾತನಾಡಿ, ಶ್ರೀರಾಮ್ ಫೈನಾನ್ಸ್ ಎಂಬ ಸಂಸ್ಥೆಯು ರಾಜ್ಯದಲ್ಲಿ ೩೦ ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಕಳೆದ ೧೨ ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಎಂಟರಿಂದ, ಪಿಯುಸಿ ವರೆಗೂ ವ್ಯಾಸಾಂಗ ಮಾಡುತ್ತಿರುವ ಟ್ರಕ್ ಮತ್ತು ಲಾರಿ ಡ್ರೈವರ್ ಹಾಗೂ ಕ್ಲಿನರ್ ಕುಟುಂಬದ ಪ್ರತಿ ಮಗುವಿಗೆ ನಾಲ್ಕುವರೆ ಸಾವಿರ ಧನ ಸಹಾಯ ನೀಡಿದ್ದು ಜಿಲ್ಲೆಯಲ್ಲಿ ಒಟ್ಟು ೩೬೦ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿಯನ್ನು ನೆರವಿನ ರೂಪದಲ್ಲಿ ನೀಡಿರುವುದು ಒಳ್ಳೆಯ ಬೆಳವಣಿಗೆ.ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದು ಬಡಮಕ್ಕಳ ಬಾಳಿಗೆ ಆಸರೆಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಅಧಿಕಾರಿವರ್ಗ, ವಿದ್ಯಾರ್ಥಿಗಳು, ಲಾರಿ, ಟ್ರಕ್, ಡ್ರೈವರ್ ಕ್ಲೀನರ‍್ಸ್ ಕುಟುಂಬ ವರ್ಗ ಹಾಜರಿದ್ದರು.